ಕೇರಳ: 'ಕಲೆಕ್ಟರ್ ಬ್ರೋ' ಸೇರಿ ಇಬ್ಬರು ಐಎಎಸ್ ಅಧಿಕಾರಿಗಳು ಅಮಾನತು
ಎನ್ ಪ್ರಶಾಂತ್ (Photo: NDTV)
ತಿರುವನಂತಪುರಂ: ಕೇರಳ ಸರ್ಕಾರ ಸೋಮವಾರ ಐಎಎಸ್ ಅಧಿಕಾರಿಗಳಾದ ಕೆ. ಗೋಪಾಲಕೃಷ್ಣನ್ ಮತ್ತು 'ಕಲೆಕ್ಟರ್ ಬ್ರೋ' ಎಂದು ಜನಪ್ರಿಯರಾಗಿದ್ದ ಎನ್ ಪ್ರಶಾಂತ್ ಅವರನ್ನು ಶಿಸ್ತು ಕ್ರಮದ ಭಾಗವಾಗಿ ಅಮಾನತುಗೊಳಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸರ್ಕಾರಿ ಅಧಿಕಾರಿಗಳ ಧರ್ಮ ಆಧಾರಿತ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಗೋಪಾಲಕೃಷ್ಣನ್ ಅವರನ್ನು ಅಮಾನತುಗೊಳಿಸಿದ್ದರೆ, ಸಾಮಾಜಿಕ ಮಾಧ್ಯಮದಲ್ಲಿ ಹಿರಿಯ ಐಎಎಸ್ ಅಧಿಕಾರಿಯನ್ನು ಟೀಕಿಸಿದ್ದಕ್ಕಾಗಿ ಪ್ರಶಾಂತ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಗೋಪಾಲಕೃಷ್ಣನ್ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕರಾಗಿದ್ದು, ಪ್ರಶಾಂತ್ ಅವರು ಕೃಷಿ ಅಭಿವೃದ್ಧಿ ಮತ್ತು ರೈತ ಕಲ್ಯಾಣ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮುಖ್ಯ ಕಾರ್ಯದರ್ಶಿಯವರಿಂದ ಪಡೆದ ವರದಿಯ ಆಧಾರದ ಮೇಲೆ ಅಧಿಕಾರಿಗಳನ್ನು ಅಮಾನತು ಮಾಡಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಫೇಸ್ಬುಕ್ ನಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಯತಿಲಕ್ ಅವರನ್ನು ಟೀಕಿಸಿದ್ದ ಪ್ರಶಾಂತ್, ಜಯತಿಲಕ್ ಅವರು ವಿಶೇಷ ವರದಿಗಾರರಾಗಿದ್ದಾರೆ, ನನ್ನ ಘನತೆಗೆ ಧಕ್ಕೆ ತರಲು ಮಾಧ್ಯಮಗಳ ಮೂಲಕ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದರು.
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಯೋಜನೆ 'ಉನ್ನತಿ'ಯಿಂದ ಹಲವಾರು ನಿರ್ಣಾಯಕ ಫೈಲ್ಗಳು ಪ್ರಶಾಂತ್ ಅವರು ಸಿಇಒ ಆಗಿದ್ದ ಅವಧಿಯಲ್ಲಿ ನಿಗೂಢವಾಗಿ ನಾಪತ್ತೆಯಾಗಿವೆ ಎಂದು ಆರೋಪಿಸಲಾಗಿತ್ತು. ಜಯತಿಲಕ್ ಅವರು ಮುಖ್ಯಮಂತ್ರಿ ವಿಜಯನ್ ಅವರಿಗೆ ಈ ಕುರಿತು ವರದಿ ಸಲ್ಲಿಸಿದ್ದಾರೆ ಎಂದು ಕೂಡ ವರದಿ ಹೇಳಿತ್ತು.
ಈ ಹಿಂದೆ ಕೋಝಿಕ್ಕೋಡ್ ಜಿಲ್ಲಾಧಿಕಾರಿಯಾಗಿ ಮತ್ತು ಇತರ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಪ್ರಶಾಂತ್ ಅವರು 'ಕಲೆಕ್ಟರ್ ಬ್ರೋ' ಎಂದು ಜನಪ್ರಿಯರಾಗಿದ್ದರು. ತಮ್ಮ ವಿರುದ್ಧ ಜಯತಿಲಕ್ ಮಾಡಿರುವ ಆರೋಪಗಳನ್ನು ನಿರಾಕರಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು.