ಕೊಲಿಜಿಯಂನಿಂದ ಏಳು ಹೈಕೋರ್ಟ್ ಗಳಿಗೆ ನೂತನ ಮುಖ್ಯ ನ್ಯಾಯಾಧೀಶರ ಶಿಫಾರಸು

Supreme Court | Photo: PTI
ಹೊಸದಿಲ್ಲಿ: ದೇಶಾದ್ಯಂತದ ಏಳು ಪ್ರಮುಖ ಉಚ್ಚ ನ್ಯಾಯಾಲಯಗಳಿಗೆ ನೂತನ ಮುಖ್ಯ ನ್ಯಾಯಾಧೀಶರ ಹೆಸರುಗಳನ್ನು ಶಿಫಾರಸು ಮಾಡಿರುವ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ, ಸೇವಾ ಹಿರಿತನ,ಪ್ರಾದೇಶಿಕ ಪ್ರಾತಿನಿಧ್ಯ ಮತ್ತು ಉನ್ನತ ನ್ಯಾಯಾಂಗದಲ್ಲಿ ಮಹಿಳಾ ನ್ಯಾಯಾಧೀಶರ ಅಗತ್ಯದ ಸಾಂಪ್ರದಾಯಿಕ ಮಾನದಂಡಗಳಿಗೆ ಮಣೆ ಹಾಕಿದೆ.
ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ಕೇರಳ, ಒಡಿಶಾ, ಮಣಿಪುರ, ಆಂಧ್ರಪ್ರದೇಶ, ಬಾಂಬೆ, ತೆಲಂಗಾಣ ಮತ್ತು ಗುಜರಾತ್ ಉಚ್ಚ ನ್ಯಾಯಾಲಯಗಳಲ್ಲಿ ಹಾಲಿ ಇರುವ ಮತ್ತು ಭವಿಷ್ಯದಲ್ಲಿಯ ಖಾಲಿ ಹುದ್ದೆಗಳಿಗೆ ಮುಖ್ಯ ನ್ಯಾಯಾಧೀಶರನ್ನು ಭರ್ತಿ ಮಾಡಲು ಪ್ರಸ್ತಾವಿಸಿದೆ.
ಕೇರಳ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನಾಗಿ ಗುಜರಾತ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಆಶಿಷ್ ಜೆ.ದೇಸಾಯಿ ಅವರ ಹೆಸರನ್ನು ಸೂಚಿಸಿರುವ ಕೊಲಿಜಿಯಂ, ಕೇರಳ ಉಚ್ಚ ನ್ಯಾಯಾಲಯದ ಹಾಲಿ ಮುಖ್ಯ ನ್ಯಾಯಾಧೀಶ ಎಸ್.ವೆಂಕಟನಾರಾಯಣ ಭಟ್ಟಿ ಅವರನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗೆ ಶಿಫಾರಸು ಮಾಡಿದೆ.
ನ್ಯಾ.ದೇಸಾಯಿ ಅವರು ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶರ ನಂತರ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದು, ನ್ಯಾ.ಸೋನಿಯಾ ಜಿ.ಗೋಕಾನಿಯವರ ನಿವೃತ್ತಿಯ ಬಳಿಕ ಮುಖ್ಯ ನ್ಯಾಯಾಧೀಶರ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಮೂರ್ತಿಗಳಲ್ಲಿ ಗುಜರಾತ್ ಪ್ರಾತಿನಿಧ್ಯ ಹೊಂದಿಲ್ಲ ಎನ್ನುವುದನ್ನು ಕೊಲಿಜಿಯಂ ಬೆಟ್ಟು ಮಾಡಿದೆ.
ಹಾಲಿ ಒಡಿಶಾ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುವ,ತನ್ನ ಮಾತೃ ತ್ರಿಪುರಾ ಉಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶರ ಬಳಿಕ ಅತ್ಯಂತ ಹಿರಿಯ ನ್ಯಾಯಾಧೀಶ ಸುಭಾಸಿಸ್ ತಲಪಾತ್ರಾ ಅವರನ್ನು 2023,ಆಗಸ್ಟ್ನಲ್ಲಿ ನಿವೃತ್ತರಾಗಲಿರುವ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್.ಮುರಳೀಧರ್ ಅವರ ಸ್ಥಾನಕ್ಕೆ ಶಿಫಾರಸು ಮಾಡಿರುವ ಕೊಲಿಜಿಯಂ,ತ್ರಿಪುರಾ ಉಚ್ಚ ನ್ಯಾಯಾಲಯವು 2013ರಲ್ಲಿ ಸ್ಥಾಪನೆಗೊಂಡಾಗಿನಿಂದಲೂ ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರಲ್ಲಿ ಪ್ರಾತಿನಿಧ್ಯವನ್ನು ಪಡೆದಿಲ್ಲ ಎಂದು ಹೇಳಿದೆ.
ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶರನ್ನು ಹೊರತುಪಡಿಸಿ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವ ಸಿದ್ಧಾರ್ಥ ಮೃದುಲ್ ಅವರನ್ನು ಮಣಿಪುರ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕಕ್ಕಾಗಿ ಶಿಫಾರಸು ಮಾಡಲಾಗಿದೆ. ಮಣಿಪುರ ಉಚ್ಚ ನ್ಯಾಯಾಲಯವು ಪ್ರಸ್ತುತ ಪ್ರಭಾರ ಮುಖ್ಯ ನ್ಯಾಯಾಧೀಶ ಎಂ.ವಿ.ಮುರಳೀಧರನ್ ಅವರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು,ರಾಜ್ಯದಲ್ಲಿ ಮೈತೆಯಿ ಮತ್ತು ಕುಕಿಗಳ ನಡುವಿನ ಜನಾಂಗೀಯ ಹಿಂಸಾಚಾರಕ್ಕೆ ಅವರ ಮೇ 27ರ ಆದೇಶ ಕಾರಣವಾಗಿತ್ತು ಎನ್ನಲಾಗಿದೆ.
ಕೊಲಿಜಿಯಂ ಬಾಂಬೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಧೀರಜ್ ಸಿಂಗ್ ಠಾಕೂರ್ ಅವರನ್ನು ಮಣಿಪುರ ಮುಖ್ಯ ನ್ಯಾಯಾಧೀಶರಾಗಿ ಪದೋನ್ನತಿಗೆ 2023,ಫೆ.9ರಂದು ಶಿಫಾರಸು ಮಾಡಿತ್ತು. ಅದಿನ್ನೂ ಬಾಕಿಯಿದ್ದು,ಅದರ ಬದಲು ಈಗ ನಾ.ಮೃದುಲ್ ಹೆಸರನ್ನು ಶಿಫಾರಸು ಮಾಡಲಾಗಿದೆ. ಈಗ ನ್ಯಾ.ಠಾಕೂರ್ ಅವರ ಹೆಸರನ್ನು ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಹುದ್ದೆಗೆ ಶಿಫಾರಸು ಮಾಡಲಾಗಿದೆ. ನ್ಯಾ.ಪ್ರಶಾಂತಕುಮಾರ್ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗೊಂಡ ಬಳಿಕ 2023,ಮೇ 19ರಿಂದ ಆಂಧ್ರಪ್ರದೇಶ ಮುಖ್ಯ ನ್ಯಾಯಾಧೀಶರ ಹುದ್ದೆಯು ಖಾಲಿ ಉಳಿದುಕೊಂಡಿದೆ.
ನ್ಯಾ.ಠಾಕೂರ್ ಅವರು ತನ್ನ ಮಾತೃ ಜಮ್ಮುಕಾಶ್ಮೀರ ಉಚ್ಚ ನ್ಯಾಯಾಲಯದ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದು,ಅವರ ನೇಮಕದೊಂದಿಗೆ ಅದು ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರಲ್ಲಿ ಪ್ರಾತಿನಿಧ್ಯವನ್ನು ಹೊಂದಲಿದೆ ಎಂದು ಕೊಲಿಜಿಯಂ ಹೇಳಿದೆ.
ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಗಳ ನಂತರ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರ ಹೆಸರನ್ನು ನ್ಯಾ.ರಮೇಶ್ ಡಿ.ಧನುಕಾ ಅವರ ನಿವೃತ್ತಿಯ ಬಳಿಕ ಖಾಲಿ ಉಳಿದಿರುವ ಬಾಂಬೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಹುದ್ದೆಗೆ ಶಿಫಾರಸು ಮಾಡಲಾಗಿದೆ.
ಅಲಹಾಬಾದ್ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಸುನೀತಾ ಅಗರವಾಲ್ ಅವರನ್ನು ಗುಜರಾತ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಕ್ಕೆ ಶಿಫಾರಸು ಮಾಡಲಾಗಿದೆ. ಉಚ್ಚ ನ್ಯಾಯಾಲಯಗಳಲ್ಲಿ ಪ್ರಸ್ತುತ ಮಹಿಳಾ ಮುಖ್ಯ ನ್ಯಾಯಾಧೀಶರಿಲ್ಲ,ಹೀಗಾಗಿ ಅಗರವಾಲ್ ನೇಮಕಗೊಂಡರೆ ಅವರು ಏಕೈಕ ಮಹಿಳಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗುತ್ತಾರೆ ಎಂದು ಕೊಲಿಜಿಯಂ ಹೇಳಿದೆ.
ತನ್ನ ಮಾತೃ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಿಂದ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುವ ನ್ಯಾ.ಅಲೋಕ್ ಆರಾಧೆ ಅವರನ್ನು ತೆಲಂಗಾಣ ಮುಖ್ಯ ನ್ಯಾಯಾಧೀಶರನ್ನಾಗಿ ಪದೋನ್ನತಿಗೊಳಿಸುವಂತೆ ಪ್ರಸ್ತಾವಿಸಿರುವ ಕೊಲಿಜಿಯಂ, ಅಲ್ಲಿಯ ಹಾಲಿ ಮುಖ್ಯ ನ್ಯಾಯಾಧೀಶ ಉಜ್ಜಲ್ ಭುಯಾನ್ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ಪದೋನ್ನತಿಗೆ ಶಿಫಾರಸು ಮಾಡಿದೆ.