ವೈದ್ಯರು, ದಾದಿಯರ ಸುರಕ್ಷೆಗೆ ಕೇಂದ್ರದಿಂದ ಸಮಿತಿ ರಚನೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ವೈದ್ಯರು ಹಾಗೂ ದಾದಿಯರ ಸುರಕ್ಷೆಯನ್ನು ಸುಧಾರಿಸಲು ಕ್ರಮಗಳ ಶಿಫಾರಸಿಗೆ ಸಮಿತಿಯೊಂದನ್ನು ರೂಪಿಸಲಾಗುವುದು ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಘೋಷಿಸಿದೆ.
ಕೋಲ್ಕತ್ತಾದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ತಮ್ಮ ಸಹೋದ್ಯೋಗಿಯ ಅತ್ಯಾಚಾರ ಹಾಗೂ ಹತ್ಯೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ವೈದ್ಯರು ದೇಶಾದ್ಯಂತ 24 ಗಂಟೆಗಳ ಮುಷ್ಕರ ನಡೆಸುತ್ತಿರುವ ಸಂದರ್ಭ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಈ ಪ್ರಕಟಣೆ ನೀಡಿದೆ.
ರಾಜ್ಯ ಸರಕಾರಗಳು ಸೇರಿದಂತೆ ಎಲ್ಲಾ ಪಾಲುದಾರರ ಪ್ರತಿನಿಧಿಗಳು ಸಮಿತಿಯೊಂದಿಗೆ ತಮ್ಮ ಸಲಹೆಗಳನ್ನು ಹಂಚಿಕೊಳ್ಳಲು ಆಹ್ವಾನಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಡೆಂಗಿ, ಮಲೇರಿಯಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಹಾಗೂ ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ತಮ್ಮ ಕರ್ತವ್ಯವನ್ನು ಪುನರಾರಂಭಿಸುವಂತೆ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ವೈದ್ಯರಲ್ಲಿ ಸಚಿವಾಲಯ ವಿನಂತಿಸಿದೆ.
ಕೋಲ್ಕತ್ತಾದ ಘಟನೆ ಹಿನ್ನೆಲೆಯಲ್ಲಿ ನಿವಾಸಿ ವೈದ್ಯರ ಸಂಘಟನೆಗಳ ಒಕ್ಕೂಟ (ಎಫ್ಒಆರ್ಡಿಎ), ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ಹಾಗೂ ದಿಲ್ಲಿಯ ಸರಕಾರಿ ವೈದ್ಯಕೀಯ ಕಾಲೇಜುಗಳು ಹಾಗೂ ಆಸ್ಪತ್ರೆಗಳ ನಿವಾಸಿ ವೈದ್ಯರ ಸಂಘಟನೆಗಳ ಪ್ರತಿನಿಧಿಗಳು ಕೇಂದ್ರ ಸಚಿವರನ್ನು ಭೇಟಿಯಾಗಿದ್ದಾರೆ.
ಕೆಲಸದ ಸ್ಥಳದಲ್ಲಿ ವೈದ್ಯರು ಹಾಗೂ ದಾದಿಯರಿಗೆ ಭದ್ರತೆ ಹಾಗೂ ಸುರಕ್ಷೆಗೆ ಸಂಬಂಧಿಸಿದ ತಮ್ಮ ಆಗ್ರಹವನ್ನು ಸಂಘಟನೆ ತಮ್ಮ ಮುಂದಿರಿಸಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಸಚಿವಾಲಯ ಅವರ ಆಗ್ರಹಗಳನ್ನು ಆಲಿಸಿದೆ ಹಾಗೂ ವೈದ್ಯರು, ದಾದಿಯರಿಗೆ ಭದ್ರತೆಯ ಖಾತರಿ ನೀಡಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುವುದು ಎಂದು ವೈದ್ಯರ ಸಂಘಟನೆಗಳಿಗೆ ಭರವಸೆ ನೀಡಿದೆ.
ಸರಕಾರಕ್ಕೆ ಪರಿಸ್ಥಿತಿ ಬಗ್ಗೆ ಚೆನ್ನಾಗಿ ಅರಿವಿದೆ ಹಾಗೂ ಅವರ ಬೇಡಿಕೆಗಳಿಗೆ ಸಂವೇದನಾಶೀಲವಾಗಿದೆ ಎಂದು ಸಂಘಟನೆಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅದು ತಿಳಿಸಿದೆ.
ವೈದ್ಯರು ಹಾಗೂ ದಾದಿಯರ ರಕ್ಷಣೆಗೆ 26 ರಾಜ್ಯಗಳು ಈಗಾಗಲೇ ಕಾನೂನು ಅಂಗೀಕರಿಸಿವೆ ಎಂದು ಅದು ತಿಳಿಸಿದೆ. ಸಂಘಟನೆಗಳು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ದಾದಿಯರ ಸುರಕ್ಷೆಗೆ ಖಾತರಿ ನೀಡಲು ಇಂತಹ ಎಲ್ಲಾ ಸಾಧ್ಯವಿರುವ ಕ್ರಮಗಳ ಸಲಹೆ ನೀಡಲು ಸಮಿತಿಯನ್ನು ರೂಪಿಸಲಾಗಿದೆ ಎಂದು ಅವರಿಗೆ ಸಚಿವಾಲಯ ಭರವಸೆ ನೀಡಿದೆ.