ಬೈಕ್ ಅವಘಡ ಬಳಿಕ ಕೋಮು ಗಲಭೆ, ಯುವಕನ ಹತ್ಯೆ: ಜೈಪುರ ಉದ್ವಿಗ್ನ
Photo: X
ಜೈಪುರ :ಮೋಟಾರ್ ಬೈಕ್ ಅವಘಡಕ್ಕೆ ಸಂಬಂಧಿಸಿದ ವಿವಾದದಲ್ಲಿ ವ್ಯಕ್ತಿಯೊಬ್ಬ ಕೊಲೆಯಾದ ಬಳಿಕ ಶನಿವಾರ ರಾಜಸ್ಥಾನದ ರಾಜಧಾನಿ ಜೈಪುರದ ರಾಮಗಂಜ್ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಕೋಮು ಉದ್ವಿಗ್ನತೆಯುಂಟಾಗಿದೆ.
ಎರಡು ಮೋಟಾರ್ ಬೈಕ್ ಗಳ ನಡುವೆ ಅಪಘಾತವಾದ ಬಳಿಕ ಗುಂಪೊಂದು ಯುವಕನನ್ನು ಹಿಗ್ಗಾಮಗ್ಗಾ ಥಳಿಸಿದ್ದರಿಂದ ಆತ ಸಾವನ್ನಪ್ಪಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಜೈಪುರದ ಸುಭಾಷ್ ಚೌಕ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿ ಉದ್ವಿಗ್ನತೆ ನೆಲೆಸಿದ್ದು, ಅಂಗಡಿಮುಂಗಟ್ಟೆಗಳನ್ನು ಮುಚ್ಚಲಾಗಿದೆ.
ಶುಕ್ರವಾರ ರಾತ್ರಿ ಸುಭಾಷ್ಚೌಕ ಪ್ರದೇಶದಲ್ಲಿ ಎರಡು ಮೋಟಾರ್ ಸೈಕಲ್ ಗಳು ಡಿಕ್ಕಿ ಹೊಡೆದ ಬಳಿಕ ಸವಾರನೊಬ್ಬನ ಗುಂಪಿನ ಜನರು ಇನ್ನೋರ್ವ ಸವಾರ ಇಕ್ಬಾಲ್ ಎಂಬಾತನಿಗೆ ಥಳಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ.
ಆತನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಅಂಗಡಿಮುಂಗಟ್ಟೆಗಳು ಮುಚ್ಚಲ್ಪಟ್ಟವು. ಮೃತನ ಕುಟುಂಬಿಕರು ಹಾಗೂ ಸ್ಥಳೀಯರು, ಹಲ್ಲೆ ನಡೆಸಿದವರ ವಿರುದ್ಧ ಕಾನೂನುಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಧರಣಿ ನಡೆಸಿದ್ದರು.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಉದ್ವಿಗ್ನತೆಯನ್ನು ಶಮನಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಲಾಗಿದ್ದು, ಮೃತ ಇಕ್ಬಾಲ್ ಕುಟುಂಬಕ್ಕೆ ಜೈಪುರ ಜಿಲ್ಲಾಡಳಿತವು 50 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ ಹಾಗೂ ಅವರ ಕುಟುಂಬಕ್ಕೆ ಉದ್ಯೋಗ ಹಾಗೂ ಡೈರಿಬೂತ್ ನೀಡಲಾಗುವುದೆಂದು ಪ್ರಕಟಿಸಿದೆ.