ಕೋಮು ಉದ್ವಿಗ್ನತೆ ಧಾರ್ಮಿಕ ಅಲ್ಪಸಂಖ್ಯಾತರ ಆತ್ಮವಿಶ್ವಾಸವನ್ನು ಅಲುಗಾಡಿಸಿದೆ : ನಾಗರಿಕರ ಗುಂಪು
ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದ ಗಣ್ಯರು
ಪ್ರಧಾನಿ ನರೇಂದ್ರ ಮೋದಿ | PC : PTI
ಹೊಸದಿಲ್ಲಿ : ದೇಶದಲ್ಲಿನ ಕೋಮು ಉದ್ವಿಗ್ನತೆ ಧಾರ್ಮಿಕ ಅಲ್ಪ ಸಂಖ್ಯಾತರ ಆತ್ಮವಿಶ್ವಾಸವನ್ನು ಅಲುಗಾಡಿಸಿದೆ ಎಂದು ಗಣ್ಯ ನಾಗರಿಕರ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಬರೆದ ಬಹಿರಂಗ ಪತ್ರದಲ್ಲಿ ಹೇಳಿದೆ.
ಕಳೆದ ಎರಡು ದಶಕಗಳ ಅವಧಿಯಲ್ಲಿ ಸಮುದಾಯಗಳ ನಡುವೆ ಅದರಲ್ಲೂ ಹಿಂದೂ ಹಾಗೂ ಮುಸ್ಲಿಮರ ನಡುವೆ, ಸ್ಪಲ್ಪ ಮಟ್ಟಿಗೆ ಹಿಂದೂ ಹಾಗೂ ಕ್ರೈಸ್ತರ ನಡುವಿನ ಸಂಬಂಧ ಅಗಾಧ ಪ್ರಮಾಣದಲ್ಲಿ ಹದಗೆಟ್ಟಿದೆ. ಇದರಿಂದ ಮುಸ್ಲಿಮರು ಹಾಗೂ ಕ್ರೈಸ್ತರು ತೀವ್ರ ಕಳವಳ ಹಾಗೂ ಅಭದ್ರತೆಗೆ ಒಳಗಾಗಿದ್ದಾರೆ ಎಂಬುದು ಸುಸ್ಪಷ್ಟ ಎಂದು ಅದು ಹೇಳಿದೆ.
ದೇಶವು ಈ ಹಿಂದೆ ಗಲಭೆಗಳನ್ನು ಎದುರಿಸಿದ್ದರೂ ಕಳೆದ 10 ವರ್ಷಗಳ ಘಟನೆಗಳು ಇದಕ್ಕಿಂತ ತೀರಾ ಭಿನ್ನವಾಗಿದೆ. ಯಾಕೆಂದರೆ, ಇಲ್ಲೆಲ್ಲ ಹಲವು ರಾಜ್ಯ ಸರಕಾರಗಳು ಹಾಗೂ ಅದರ ಆಡಳಿತ ಯಂತ್ರದ ‘‘ಸ್ಪಷ್ಟ ಪಕ್ಷಪಾತದ ಪಾತ್ರ’’ ಕಂಡು ಬಂದಿದೆ ಎಂದು ನಾಗರಿಕರ ಗುಂಪು ಹೇಳಿದೆ.
ಇದು ವಿಶೇಷವಾದುದು ಎಂದು ನಾವು ಭಾವಿಸುತ್ತೇವೆ ಎಂದು ಗುಂಪು ಹೇಳಿದೆ. ಗೋಮಾಂಸ ಸಾಗಿಸುವ ಆರೋಪದಲ್ಲಿ ಮುಸ್ಲಿಂ ಯುವಕರನ್ನು ಬೆದರಿಸುವ ಅಥವಾ ಥಳಿಸುವ ಘಟನೆಗಳಿಂದ ಇವು ಆರಂಭವಾದವು. ಇದು ಅಮಾಯಕ ಜನರನ್ನು ಅವರ ಮನೆಯಲ್ಲೇ ಥಳಿಸಿ ಹತ್ಯೆಗೈಯುವವರೆಗೆ ಮುಂದುವರಿಯಿತು. ಇದನ್ನು ಅನುಸರಿಸಿ ನರಮೇಧದ ಉದ್ದೇಶದಿಂದ ದ್ವೇಷ ಭಾಷಣಗಳನ್ನು ಮಾಡುವುದು ಕಂಡು ಬಂತು ಎಂದು ಅದು ಹೇಳಿದೆ.
ಇತ್ತೀಚೆಗಿನ ದಿನಗಳಲ್ಲಿ ಮುಸ್ಲಿಮರ ಉದ್ಯಮಗಳು, ತಿಂಡಿ ಅಂಗಡಿಗಳನ್ನು ಬಹಿಷ್ಕರಿಸುವಂತೆ, ಅವರಿಗೆ ನಿವೇಶನಗಳನ್ನು ಬಾಡಿಗೆಗೆ ನೀಡದಂತೆ ಕರೆ ನೀಡಲಾಯಿತು. ಮುಖ್ಯಮಂತ್ರಿ ಆಣತಿಯ ಮೇರೆಗೆ ನಿರ್ದಯ ಸ್ಥಳೀಯಾಡಳಿತದಿಂದ ಮುಸ್ಲಿಮರ ಮನೆಗಳ ಮೇಲೆ ಬುಲ್ಡೋಜರ್ ಹರಿಸಲಾಯಿತು ಎಂದು ಗುಂಪು ಹೇಳಿದೆ.
ಇಂತಹ ಚಟುವಟಿಕೆಗಳು ವಾಸ್ತವಾವಾಗಿ ಹಿಂದೆಂದೂ ನಡೆಯದಿರುವಂತದ್ದು. ಇದು ಅಲ್ಪಸಂಖ್ಯಾತರ ಆತ್ಮ ವಿಶ್ವಾಸವನ್ನು ಮಾತ್ರವಲ್ಲದೆ, ಇಲ್ಲಿ ಹಾಗೂ ವಿದೇಶದಲ್ಲಿರುವ ಎಲ್ಲಾ ಜಾತ್ಯತೀತರ ಆತ್ಮವಿಶ್ವಾಸವನ್ನು ಅಲುಗಾಡಿಸಿದೆ ಎಂದು ಗುಂಪು ಹೇಳಿದೆ.