2019ರ ಚುನಾವಣೆ ಸಂದರ್ಭದಲ್ಲಿ ಗುಜರಾತ್ ನಲ್ಲಿ ವ್ಯವಹಾರ ಹಿತಾಸಕ್ತಿ ಹೊಂದಿದ್ದ ಕಂಪನಿಗಳಿಂದ ಚುನಾವಣಾ ಬಾಂಡ್ ಖರೀದಿ
ಚುನಾವಣಾ ಆಯೋಗ | Photo: PTI
ಹೊಸದಿಲ್ಲಿ: ಗುಜರಾತ್ನಲ್ಲಿ ನೋಂದಣಿಯಾದ ಕಂಪನಿಗಳ ಜತೆಗೆ, ರಾಜ್ಯದಲ್ಲಿ ವ್ಯವಹಾರ ಹಿತಾಸಕ್ತಿ ಹೊಂದಿದ ಕಾರ್ಪೊರೇಟ್ ಕಂಪನಿಗಳು ಕೂಡಾ 2019ರ ಪ್ರಮುಖ ಚುನಾವಣೆಗೆ ಮುನ್ನ ಚುನಾವಣಾ ಬಾಂಡ್ಗಳನ್ನು ಖರೀದಿಸಿದ ಮಾಹಿತಿ ಭಾರತದ ಚುನಾವಣಾ ಆಯೋಗ ಬಹಿರಂಗಪಡಿಸಿದ ಅಂಕಿ ಅಂಶಗಳಿಂದ ತಿಳಿದು ಬಂದಿದೆ ಎಂದು indianexpress.com ವರದಿ ಮಾಡಿದೆ.
ಉದಾಹರಣೆಗೆ ಜೈಪುರ ಮೂಲಕ ವಂಡರ್ ಸಿಮೆಂಟ್ಸ್, ಪಠಾಣಿ ಕುಟುಂಬ ಪ್ರವರ್ತಿಸಿದ ಸಂಸ್ಥೆಯಾಗಿದ್ದು, ಇದು 2023ರ ನವೆಂಬರ್ ನಲ್ಲಿ ಮತ್ತು ಈ ವರ್ಷದ ಜನವರಿಯಲ್ಲಿ 2 ಕೋಟಿ ರೂಪಾಯಿ ಮೌಲ್ಯದ ಬಾಂಡ್ಗಳನ್ನು ಖರೀದಿಸಿದೆ. ಜನವರಿ 6ರಂದು ಕಂಪನಿ ವಡೋದರ ಜಿಲ್ಲೆಯ ಸಾಳ್ವಿ ತಾಲೂಕಿನ ತುಳಸಿಗಾಮ್ ಎಂಬಲ್ಲಿ ಹೊಸ ಉತ್ಪಾದನಾ ಘಟಕವನ್ನು ಆರಂಭಿಸುವ ಪ್ರಕಟಣೆ ಮಾಡಿತ್ತು.
ಇದರ ಸಹ ಸಂಸ್ಥೆಯಾದ ವಂಡರ್ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಮರ್ಮೊಸ್ಟೋನ್ಸ್ ಕೂಡಾ 2023ರ ನವೆಂಬರ್ 10ರಂದು ಕ್ರಮವಾಗಿ 3 ಕೋಟಿ ಹಾಗೂ 2 ಕೋಟಿ ರೂಪಾಯಿ ಮೌಲ್ಯದ ಬಾಂಡ್ಗಳನ್ನು ಖರೀದಿಸಿದೆ. ಈ ಮೂಲಕ ವಂಡರ್ ಸಮೂಹ ಖರೀದಿಸಿದ ಒಟ್ಟು ಚುನಾವಣಾ ಬಾಂಡ್ಗಳ ಮೌಲ್ಯ 25 ಕೋಟಿ ರೂಪಾಯಿ ಆಗಿದೆ.
ಪಠಾಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಶೋಕ್ ಪಠಾಣಿ, ಸುರೇಶ್ ಪಠಾಣಿ, ವಿನೀತ್ ಪಠಾಣಿ ಅವರು ವೈಯಕ್ತಿಕವಾಗಿ 9 ಕೋಟಿ ರೂಪಾಯಿ ಮೌಲ್ಯದ ಬಾಂಡ್ಗಳನ್ನು 2022ರ ಅಕ್ಟೋಬರ್ 6 ಮತ್ತು ಅಕ್ಟೋಬರ್ 7ರಂದು ಖರೀದಿಸಿದ್ದಾರೆ.
ಅಂತೆಯೇ ಚೆನ್ನೈ ನೋಂದಣಿಯ ರಾಮ್ಕೊ ಸಿಮೆಂಟ್ಸ್ ಕಚ್ನಲ್ಲೂ ಅಸ್ತಿತ್ವ ಹೊಂದಿದ್ದು, ಇದು 54 ಕೋಟಿ ರೂಪಾಯಿ ಮೌಲ್ಯದ ಬಾಂಡ್ ಖರೀದಿಸಿದೆ. ಈ ಪೈಕಿ 2022ರ ಗುಜರಾತ್ ವಿಧಾನಸಭಾ ಚುನಾವಣೆಗೆ ಮುನ್ನ 15 ಕೋಟಿ ರೂಪಾಯಿ ಮೌಲ್ಯದ ಬಾಂಡ್ ಖರೀದಿಸಿರುವುದು ಸೇರಿದೆ.
ಗುಜರಾತ್ನಲ್ಲಿ ಪ್ರಮುಖ ಅಸ್ತಿತ್ವ ಹೊಂದಿರುವ ಗ್ರಾಸಿಮ್ ಇಂಡಸ್ಟ್ರೀಸ್ 33 ಕೋಟಿ ರೂಪಾಯಿ ಮೌಲ್ಯದ ಬಾಂಡ್ ಖರೀದಿಸಿದ್ದರೆ, ಬರೂಚ್ ಮತ್ತು ಸೂರತ್ ಜಿಲ್ಲೆಯಲ್ಲಿ ಅಸ್ತಿತ್ವ ಹೊಂದಿರುವ ಲ್ಯುಪಿನ್ ಮತ್ತು ಸಿಪ್ಲಾ ಕ್ರಮವಾಗಿ 18 ಮತ್ತು 7 ಕೋಟಿ ರೂಪಾಯಿ ಮೌಲ್ಯದ ಬಾಂಡ್ ಖರೀದಿಸಿವೆ. ಐಪಿಸಿಎ ಲ್ಯಾಬೊರೇಟರೀಸ್ 14 ಕೋಟಿ ರೂಪಾಯಿ ಮೌಲ್ಯದ ಬಾಂಡ್ ಖರೀದಿಸಿದ್ದು, ಇದು ವಡೋದರ ಜಿಲ್ಲೆಯ ಪರ್ದಾ ತಾಲೂಕಿನಲ್ಲಿ ಉತ್ಪಾದನಾ ಘಟಕ ಹೊಂದಿದೆ.