ಅತ್ಯಾಚಾರ ಪ್ರಕರಣಗಳಲ್ಲಿ ದೂರುದಾರರು ಮತ್ತು ಆರೋಪಿಗಳು ನ್ಯಾಯಾಲಯದ ಹೊರಗೆ ರಾಜಿಯಾಗುವಂತಿಲ್ಲ: ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್ | PTI
ಕೊಚ್ಚಿ: ಅತ್ಯಾಚಾರ ಪ್ರಕರಣಗಳಲ್ಲಿ ದೂರುದಾರರು ಮತ್ತು ಆರೋಪಿಗಳು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳುವಂತಿಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.
ದೂರುದಾರರು ಮತ್ತು ಆರೋಪಿಗಳ ನಡುವೆ ಇಂತಹ ರಾಜಿಯು ಸಾರ್ವಜನಿಕ ನೀತಿಗೆ ವಿರುದ್ಧವಾಗಿರುವುದರಿಂದ ಭಾರತೀಯ ಒಪ್ಪಂದ ಕಾಯ್ದೆಯಡಿ ಅನೂರ್ಜಿತವಾಗಿರುತ್ತದೆ ಎಂದು ನ್ಯಾಯಾಲಯವು ತನ್ನ ಇತ್ತೀಚಿನ ತೀರ್ಪಿನಲ್ಲಿ ಹೇಳಿದೆ.
ದೂರುದಾರರು ಮತ್ತು ಆರೋಪಿ ವಿಷಯವನ್ನು ತಮ್ಮೊಳಗೆ ಇತ್ಯರ್ಥಗೊಳಿಸಲು ಒಪ್ಪಿಕೊಂಡಿದ್ದಾರೆ ಎಂಬ ಕಾರಣಕ್ಕೆ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾ.ಎ.ಬಧರುದ್ದೀನ್ ಅವರ ಪೀಠವು ತಿಳಿಸಿತು.
ಯಾವುದೇ ಒಪ್ಪಂದವು ಅದರ ಪರಿಗಣನೆಯು ಸಾರ್ವಜನಿಕ ನೀತಿಗೆ ವಿರುದ್ಧವಾಗಿದ್ದರೆ ಅನೂರ್ಜಿತಗೊಳ್ಳುತ್ತದೆ ಎನ್ನುವುದು ಸುಸ್ಥಾಪಿತ ಕಾನೂನಾಗಿದೆ. ಇದೇ ರೀತಿಯಲ್ಲಿ ಕಾನೂನು ಕ್ರಮವನ್ನು ಹಿಂದೆಗೆದುಕೊಳ್ಳಲು ಒಪ್ಪಂದವು ಸಾರ್ವಜನಿಕ ಅಪರಾಧವನ್ನು ಒಳಗೊಂಡಿರುವ ವಿಚಾರಣೆಯನ್ನು ತಡೆಯುವ ಪ್ರಯತ್ನವಾಗಿದೆ ಮತ್ತು ಅದು ಸಾರ್ವಜನಿಕ ನೀತಿಗೂ ವಿರುದ್ಧವಾಗಿದೆ ಎಂದು ನ್ಯಾಯಾಲಯವು ಹೇಳಿತು.
ತ್ರಿಶೂರು ಜಿಲ್ಲೆಯ ಗ್ರಾಮ ಪಂಚಾಯತ್ ಕಚೇರಿಯೊಂದರ ಉದ್ಯೋಗಿಯಾಗಿದ್ದ ಮಹಿಳೆ ದೂರನ್ನು ಸಲ್ಲಿಸಿದ್ದು,ಮಾರ್ಚ್ 2016ರಲ್ಲಿ ಗ್ರಾಮ ಪಂಚಾಯತ್ನ ಸಹಾಯಕ ಕಾರ್ಯದರ್ಶಿ ಅಬ್ದುಲ್ ಜಲೀಲ್ ತನ್ನ ಮೇಲೆ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಿದ್ದರು.
ಘಟನೆಯ ಸಂದರ್ಭ ಮಹಿಳೆ 23 ವರ್ಷಗಳಿಂದಲೂ ತನ್ನ ಪತಿಯಿಂದ ಪ್ರತ್ಯೇಕಗೊಂಡಿದ್ದರು.
ಅದಕ್ಕೂ ಮುನ್ನ ಮಹಿಳೆ ಜಲೀಲ್ನ ವರ್ತನೆಯ ವಿರುದ್ಧ ಗ್ರಾಮ ಪಂಚಾಯತ್ ಕಾರ್ಯದರ್ಶಿಗೆ ದೂರು ಸಲ್ಲಿಸಿ, ಆತ ಕೆಲಸಕ್ಕೆ ಅಡ್ಡಿಯನ್ನುಂಟು ಮಾಡುತ್ತಿದ್ದಾನೆ ಮತ್ತು ತನ್ನೊಂದಿಗೆ ಕೆಲಸ ಮಾಡುವಂತೆ ಬಲವಂತಗೊಳಿಸುತ್ತಿದ್ದಾನೆ ಎಂದು ಆರೋಪಿಸಿದ್ದರು.
ಒಂದು ರವಿವಾರ ತುರ್ತು ಕೆಲಸದ ನೆಪದಲ್ಲಿ ತನ್ನನ್ನು ಪಂಚಾಯತ್ ಕಚೇರಿಗೆ ಕರೆಸಿಕೊಂಡಿದ್ದ ಜಲೀಲ್ ತನ್ನ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ಮಹಿಳೆ ಆರೋಪಿಸಿದ್ದು,2018ರಲ್ಲಿ ಜಲೀಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
ವಿವಾಹವಾಗುವ ಭರವಸೆಯನ್ನು ನೀಡಿ ಜಲೀಲ್ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಮುಂದುವರಿಸಿದ್ದ ಎನ್ನುವುದನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು. ಆದರೆ ಮಹಿಳೆ ತನ್ನನ್ನು ಸುಲಿಗೆ ಮಾಡಲು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾಳೆ ಎಂದು ಜಲೀಲ್ ಪ್ರತಿಪಾದಿಸಿದ್ದ.
ಜಲೀಲ್ ತನ್ನ ಮತ್ತು ಮಹಿಳೆಯ ನಡುವಿನ ಎರಡು ಒಪ್ಪಂದಗಳ ಪಠ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ. ತಮ್ಮ ನಡುವಿನ ಲೈಂಗಿಕ ಕ್ರಿಯೆ ಪರಸ್ಪರ ಸಮ್ಮತಿಯಿಂದ ನಡೆದಿತ್ತು ಎಂದು ಒಪ್ಪಂದಗಳಲ್ಲಿ ಹೇಳಲಾಗಿತ್ತು.
ಮಾರ್ಚ್ 2016ರಲ್ಲಿ ನಡೆದಿದ್ದ ಘಟನೆಯನ್ನು ಪರಸ್ಪರ ಸಮ್ಮತಿಯದು ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ ಉಚ್ಚ ನ್ಯಾಯಾಲಯವು,ಈ ಒಪ್ಪಂದಗಳನ್ನು ಪರಿಶೀಲಿಸಿದ ಬಳಿಕ ಅವು ಅತ್ಯಾಚಾರದ ಗಂಭೀರ ಆರೋಪದ ವಿಚಾರಣೆಯನ್ನು ತಡೆಯುವ ಉದ್ದೇಶವನ್ನು ಹೊಂದಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಈ ಒಪ್ಪಂದಗಳು ಕಾನೂನುಬಾಹಿರವಾಗಿವೆ ಮತ್ತು ಕಾನೂನು ಕ್ರಮವನ್ನು ರದ್ದುಗೊಳಿಸಲು ಏಕೈಕ ಆಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿತು.