ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ 44 ಸಾಮಾಜಿಕ ಕಾರ್ಯಕರ್ತರಿಂದ ಮುಖ್ಯ ಚುನಾವಣಾಧಿಕಾರಿಗೆ ದೂರು
ಕೆ.ಮಾಧವಿ ಲತಾ | PC : PTI
ಹೈದರಾಬಾದ್: ಸೋಮವಾರ ಚುನಾವಣಾ ಮತಗಟ್ಟೆಗಳಲ್ಲಿ ಸೌಹಾರ್ದತೆಯನ್ನು ಕದಡಲು ಪ್ರಯತ್ನಿಸಿದ ಹಾಗೂ ಮತದಾರರಿಗೆ ಬೆದರಿಕೆ ಒಡ್ಡಿದ ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಮಾಧವಿ ಲತಾ ಹಾಗೂ ಬಿಜೆಪಿ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತೆಲಂಗಾಣ ಫಾರ್ ಪೀಸ್ ಆ್ಯಂಡ್ ಯೂನಿಟಿ ಸಂಘಟನೆಯು ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ.
44 ಮಂದಿ ಸಾಮಾಜಿಕ ಹಾಗೂ ಮಾನವ ಹಕ್ಕು ಹೋರಾಟಗಾರರು ಸಹಿ ಮಾಡಿರುವ ಈ ದೂರಿನಲ್ಲಿ, ಸೋಮವಾರ ನಡೆದ ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ಮತದಾರರಿಗೆ ತಮ್ಮ ಮುಖ ಪರದೆಯನ್ನು ತೆಗೆಯುವಂತೆ ಒತ್ತಾಯಿಸಿದ್ದರಿಂದ, ಅವರ ಗುರುತಿನ ಚೀಟಿಗಳನ್ನು ಪರಿಶೀಲಿಸಿ, ಅವರ ಗುರುತಿನ ಕುರಿತು ಪ್ರಶ್ನಿಸಿದ್ದರಿಂದ ಉಳಿಕೆ ಅವಧಿಯಲ್ಲಿ ಮುಸ್ಲಿಂ ಮಹಿಳಾ ಮತದಾರರ ಮತದಾನ ಪ್ರಮಾಣದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ಮತದಾರರಿಗೆ ಗುರುತಿನ ಚೀಟಿ ಕಾಯ್ದೆ ಅಡಿ ವಿತರಿಸಲಾಗಿರುವ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಅಧಿಕಾರ ಕೇವಲ ಚುನಾವಣಾಧಿಕಾರಿ ಅಥವಾ ಅಧಿಕೃತ ಮತಗಟ್ಟೆ ಅಧಿಕಾರಿಗೆ ಮಾತ್ರವಿದೆ. ಹೀಗಾಗಿ, ತಮ್ಮ ಕೃತ್ಯಗಳನ್ನು ತಮ್ಮ ಉಮೇದುವಾರಿಕೆಯ ಮೂಲಕ ಸಮರ್ಥಿಸಿಕೊಳ್ಳುತ್ತಿರುವ ಮಾಧವಿ ಲತಾ ಅವರ ಉಮೇದುವಾರಿಕೆಯನ್ನು ನಡತೆ ನಿಯಮಾವಳಿಗಳು, 1961 ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆಯ ನಿಯಮ 35ರ ಅಡಿ ವಜಾಗೊಳಿಸಲು ಅರ್ಹವಾಗಿದೆ ಎಂದು ಹೋರಾಟಗಾರರು ಪ್ರತಿಪಾದಿಸಿದ್ದಾರೆ.
ನಿಯಮಾವಳಿಗಳ ಪ್ರಕಾರ, ವ್ಯಕ್ತಿಯೊಬ್ಬರ ಗುರುತನ್ನು ಪ್ರಶ್ನಿಸುವ ಅಧಿಕಾರ ಕೇವಲ ಚುನಾವಣಾಧಿಕಾರಿ ಅಥವಾ ಅವರಿಗೆ ನೆರವು ನೀಡಲು ನೇಮಕಗೊಂಡಿರುವ ನಿರ್ದಿಷ್ಟ ಉದ್ಯೋಗಿಗಳು ಅಥವಾ ಮತಗಟ್ಟೆ ಏಜೆಂಟ್ ಗಳಿಗೆ ಮಾತ್ರವಿದೆ ಎಂಬುದರತ್ತಲೂ ಹೋರಾಟಗಾರರು ಬೊಟ್ಟು ಮಾಡಿದ್ದಾರೆ.
ಇದಲ್ಲದೆ, ಕಳೆದ ಕೆಲವು ತಿಂಗಳಿನಿಂದ ಕೋಮು ಸೌಹಾರ್ದತೆಗೆ ಧಕ್ಕೆ ತಂದಿರುವ, ಮಾದರಿ ನೀತಿ ಸಂಹಿತೆ ಹಾಗೂ ನೆಲದ ಕಾನೂನುಗಳೆರಡನ್ನೂ ಉಲ್ಲಂಘಿಸಿರುವ ಮಾಧರಿ ಲತಾರ ಭಾಷಣಗಳು ಹಾಗೂ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ, ಅವುಗಳ ಕುರಿತು ತನಿಖೆ ನಡೆಸಬೇಕು ಎಂದೂ ಹೋರಾಟಗಾರರು ಮುಖ್ಯ ಚುನಾವಣಾಧಿಕಾರಿಗೆ ಮನವಿ ಮಾಡಿದ್ದಾರೆ.