ಇಫ್ತಾರ್ ಕೂಟದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ನಟ ವಿಜಯ್ ವಿರುದ್ಧ ದೂರು ದಾಖಲು

ನಟ ವಿಜಯ್ (Photo: PTI)
ಚೆನ್ನೈ : ಇತ್ತೀಚೆಗೆ ಇಫ್ತಾರ್ ಕೂಟದಲ್ಲಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ ಮತ್ತು ಮುಸ್ಲಿಮರಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ನಟ, ರಾಜಕಾರಣಿ ವಿಜಯ್ ವಿರುದ್ಧ ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಾಗಿದೆ.
ತಮಿಳು ಚಲನಚಿತ್ರ ನಟ ವಿಜಯ್ ಇತ್ತೀಚೆಗೆ ಚೆನ್ನೈನ ರಾಯಪೆಟ್ಟಾದಲ್ಲಿರುವ ವೈಎಂಸಿಎ ಮೈದಾನದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಈ ಬಗ್ಗೆ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಇಫ್ತಾರ್ ಕೂಟ ಇದೀಗ ವಿವಾದಕ್ಕೆ ಕಾರಣವಾಗಿದೆ. ತಮಿಳುನಾಡು ಸುನ್ನತ್ ಜಮಾಅತ್ ಈ ಕುರಿತು ದೂರು ದಾಖಲಿಸಿದೆ. ಧಾರ್ಮಿಕ ಆಚರಣೆಗೆ ಸಂಬಂಧವಿಲ್ಲದ ಕುಡುಕರು, ರೌಡಿಗಳು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದೆ. ಇದು ಈ ಸಂದರ್ಭದ ಪಾವಿತ್ರ್ಯತೆಗೆ ಅಗೌರವವಾಗಿದೆ ಎಂದು ದೂರಿನಲ್ಲಿ ಹೇಳಿದೆ.
ಈ ಕುರಿತು ತಮಿಳುನಾಡು ಸುನ್ನತ್ ಜಮಾಅತ್ ಕೋಶಾಧಿಕಾರಿ ಸೈಯದ್ ಕೌಸ್ ಪ್ರತಿಕ್ರಿಯಿಸಿ, ಇಫ್ತಾರ್ ಕೂಟಕ್ಕೆ ಸರಿಯಾಗಿ ವ್ಯವಸ್ಥೆಯನ್ನು ಮಾಡಿಲ್ಲ. ಇಫ್ತಾರ್ ಕೂಟವನ್ನು ನಿಜವಾದ ಆಶಯಕ್ಕೆ ವಿರುದ್ಧವಾಗಿ ಆಯೋಜಿಸಲಾಗಿದೆ. ಉಪವಾಸ ಅಥವಾ ಇಫ್ತಾರ್ಗೆ ಯಾವುದೇ ಸಂಬಂಧವಿಲ್ಲದ ಜನರು ಉಪಸ್ಥಿತರಿದ್ದರು, ಇದು ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ವಿಜಯ್ ಅವರ ವಿದೇಶಿ ಗಾರ್ಡ್ಗಳು ಹಾಜರಿದ್ದವರನ್ನು ಅಗೌರವದಿಂದ ನಡೆಸಿಕೊಂಡರು. ಆದ್ದರಿಂದ ವಿಜಯ್ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಳೆದ ವರ್ಷ ವಿಜಯ್ ಅಧಿಕೃತವಾಗಿ ತಮ್ಮ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ(TVK)ನ್ನು ಪ್ರಾರಂಭಿಸಿದರು. ಅವರು 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ.