ಜಾಹೀರಾತು ಫಲಕ ಕುಸಿದು ಸಾವುಗಳು ಸಂಭವಿಸಿದ್ದ ಪ್ರದೇಶದಲ್ಲಿ ರೋಡ್ ಶೋ ನಡೆಸಿದ್ದು ಅಮಾನವೀಯ : ಪ್ರಧಾನಿ ಮೋದಿ ವಿರುದ್ಧ ಸಂಜಯ್ ರಾವುತ್ ವಾಗ್ದಾಳಿ
ನರೇಂದ್ರ ಮೋದಿ , ಸಂಜಯ್ ರಾವುತ್ | PC : PTI
ಮುಂಬೈ : ಪ್ರಧಾನಿ ನರೇಂದ್ರ ಮೋದಿಯವರು ಜಾಹೀರಾತು ಫಲಕ ಕುಸಿದು 16 ಜನರು ಮೃತಪಟ್ಟಿದ್ದ ಮುಂಬೈನ ಘಾಟಕೋಪರ್ ಪ್ರದೇಶದಲ್ಲಿ ರೋಡ್ ಶೋ ನಡೆಸಿದ್ದು ಅಮಾನವೀಯ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ಗುರುವಾರ ಕಿಡಿಕಾರಿದರು.
ಬುಧವಾರ ಘಾಟಕೋಪರ್ ಪಶ್ಚಿಮದಿಂದ ಘಾಟಕೋಪರ್ ಪೂರ್ವದವರೆಗೆ ಮೋದಿಯವರ ರೋಡ್ ಶೋ ನಿಮಿತ್ತ ಮಧ್ಯಾಹ್ನ 12 ಗಂಟೆಯಿಂದ ರಸ್ತೆಗಳನ್ನು ಮತ್ತು ಮೆಟ್ರೋ ರೈಲು ಸೇವೆಗಳನ್ನು ಮುಚ್ಚಲಾಗಿತ್ತು. ಓರ್ವ ವ್ಯಕ್ತಿಯ ಪ್ರಚಾರ ಕಾರ್ಯಕ್ಕಾಗಿ ರಸ್ತೆಗಳನ್ನು ಮುಚ್ಚಿ ಜನರಿಗೆ ಅನಾನುಕೂಲವನ್ನುಂಟು ಮಾಡಿದ ಇಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ. ಜಾಹೀರಾತು ಫಲಕ ಕುಸಿದು ಜನರು ಮೃತಪಟ್ಟಿದ್ದ ಪ್ರದೇಶದಲ್ಲಿ ರೋಡ್ ಶೋ ನಡೆಸಿದ್ದು ಅಮಾನವೀಯವಾಗಿದೆ ಎಂದು ರಾವುತ್ ಹೇಳಿದರು.
ಸೋಮವಾರ ಧೂಳು ಬಿರುಗಾಳಿಯಿಂದಾಗಿ ಘಾಟಕೋಪರ್ನ ಛೆಡ್ಡಾನಗರ ಪ್ರದೇಶದಲ್ಲಿ ಬೃಹತ್ ಜಾಹೀರಾತು ಫಲಕ ಕುಸಿದು ಬಿದ್ದ ಪರಿಣಾಮ 16 ಜನರು ಮೃತಪಟ್ಟು,75 ಜನರು ಗಾಯಗೊಂಡಿದ್ದರು.
ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಮೋದಿ ಬುಧವಾರ ಸಂಜೆ ಘಾಟಕೋಪರ್ನಲ್ಲಿ ಮೆಗಾ ರೋಡ್ ಶೋ ನಡೆಸಿದ್ದರು.
ರೋಡ್ ಶೋಗೆ ಮುನ್ನ ಭದ್ರತಾ ಕಾರಣಗಳಿಂದಾಗಿ ಜಾಗೃತಿ ನಗರ ಮತ್ತು ಘಾಟಕೋಪರ್ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಮೋದಿ ಸಾಗಲಿದ್ದ ಮಾರ್ಗಕ್ಕೆ ಹೊಂದಿಕೊಂಡಿದ್ದ ರಸ್ತೆಗಳನ್ನು ಮುಚ್ಚಿದ್ದ ಪೋಲಿಸರು ಸಂಚಾರ ಮಾರ್ಗಗಳನ್ನು ಬದಲಿಸಿದ್ದರು.