ಚುನಾವಣಾ ಆಯೋಗದಿಂದ ಫಲಿತಾಂಶ ಪರಿಷ್ಕರಣೆಯಲ್ಲಿ ನಿಧಾನಗತಿ : ಕಾಂಗ್ರೆಸ್ ಆರೋಪ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ | PC : PTI
ಹೊಸದಿಲ್ಲಿ : ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪರಿಷ್ಕರಿಸುವಾಗ ‘‘ನಿಧಾನಗತಿ’’ಯನ್ನು ಅನುಸರಿಸಲಾಗಿದೆ ಎಂದು ಕಾಂಗ್ರೆಸ್ ಮಂಗಳವಾರ ಆಯೋಗಕ್ಕೆ ದೂರು ನೀಡಿದೆ. ‘‘ಸುಳ್ಳು ಸುದ್ದಿ ಮತ್ತು ದುರುದ್ದೇಶಪೂರಿತ ವ್ಯಾಖ್ಯಾನ’’ಗಳನ್ನು ತಕ್ಷಣ ನಿಭಾಯಿಸಲು ಸಾಧ್ಯವಾಗುವಂತೆ ನಿಖರ ಫಲಿತಾಂಶವನ್ನು ವೆಬ್ಸೈಟ್ಗೆ ಹಾಕುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಅದು ಆಯೋಗವನ್ನು ಒತ್ತಾಯಿಸಿದೆ.
ಬೆಳಗ್ಗೆ 9 ಮತ್ತು 11ರ ನಡುವಿನ ಎರಡು ಗಂಟೆಗಳ ಅವಧಿಯಲ್ಲಿ, ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಫಲಿತಾಂಶ ಪರಿಷ್ಕರಣೆಯಲ್ಲಿ ‘‘ವಿವರಿಸಲಾಗದ ನಿಧಾನಗತಿ’’ ಕಂಡುಬಂದಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
‘‘ಇದು ದುರುದ್ದೇಶಪೂರಿತ ವ್ಯಾಖ್ಯಾನಗಳನ್ನು ಹರಿಯಬಿಡಲು ದುರುದ್ದೇಶದ ಜನರಿಗೆ ಅವಕಾಶ ನೀಡುತ್ತದೆ ಎನ್ನುವುದನ್ನು ಯಾರೂ ಊಹಿಸಬಹುದಾಗಿದೆ. ಇದು ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದು ಈಗಾಗಲೇ ಸಂಭವಿಸಿರುವುದನ್ನು ನೀವು ಗಮನಿಸಬಹುದಾಗಿದೆ’’ ಎಂದು ರಮೇಶ್ ತನ್ನ ಪತ್ರದಲ್ಲಿ ಬರೆದಿದ್ದಾರೆ.
‘‘ಅದೂ ಅಲ್ಲದೆ, ಚುನಾವಣಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಲು ಇಂಥ ದುರುದ್ದೇಶಪೂರಿತ ವ್ಯಾಖ್ಯಾನಗಳನ್ನು ಜನರು ಬಳಸಿಕೊಳ್ಳಬಹುದಾಗಿದೆ. ಹೆಚ್ಚಿನ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಈಗಲೂ ನಡೆಯುತ್ತಿದೆ’’ ಎಂದು ಅವರು ಹೇಳಿದ್ದಾರೆ.
► ಆಧಾರರಹಿತ ಆರೋಪ: ಚುನಾವಣಾ ಆಯೋಗ
ಚುನಾವಣಾ ಫಲಿತಾಂಶ ಪರಿಷ್ಕರಣೆಯನ್ನು ವಿಳಂಬಿಸುವ ಮೂಲಕ ದುರುದ್ದೇಶಪೂರಿತ ವ್ಯಾಖ್ಯಾನಗಳನ್ನು ಹರಡುವ ವ್ಯಕ್ತಿಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂಬ ಕಾಂಗ್ರೆಸ್ ಪಕ್ಷದ ಆರೋಪವನ್ನು ಭಾರತೀಯ ಚುನಾವಣಾ ಆಯೋಗ ಮಂಗಳವಾರ ತಿರಸ್ಕರಿಸಿದೆ.
‘‘ಫಲಿತಾಂಶ ಪರಿಷ್ಕರಣೆಯಲ್ಲಿ ವಿಳಂಬವಾಗುತ್ತಿದೆ ಎಂಬ ನಿಮ್ಮ ಆಧಾರರಹಿತ ಆರೋಪವನ್ನು ಸಾಬೀತುಪಡಿಸಲು ಯಾವುದೇ ಪುರಾವೆಯಿಲ್ಲ’’ ಎಂದು ಆಯೋಗ ಹೇಳಿದೆ. ಆರೋಪಕ್ಕೆ ಪೂರಕವಾಗಿ, ಯಾವುದೇ ನಿರ್ದಿಷ್ಟ ಕ್ಷೇತ್ರಗಳನ್ನು ಜೈರಾಮ್ ರಮೇಶ್ ತನ್ನ ಪತ್ರದಲ್ಲಿ ಹೆಸರಿಸಿಲ್ಲ’’ ಎಂದು ಅದು ಹೇಳಿದೆ.
ಜೂನ್ 4ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟನೆಯ ಸಂದರ್ಭದಲ್ಲೂ ಕಾಂಗ್ರೆಸ್ ಇಂಥದೇ ಆರೋಪವನ್ನು ಮಾಡಿತ್ತು ಎಂದು ಚುನಾವಣಾ ಆಯೋಗ ಹೇಳಿದೆ.