ಮದ್ಯ ಹಗರಣದ ತನಿಖೆಯನ್ನು ಬಿಜೆಪಿ ನಾಯಕರ ವಿರುದ್ಧದ ದೂರಿಗೂ ವಿಸ್ತರಿಸಬೇಕು:ಕಾಂಗ್ರೆಸ್ ಆಗ್ರಹ

ದೇವೇಂದ್ರ ಯಾದವ್ | PTI
ಹೊಸದಿಲ್ಲಿ: ಹಿಂದಿನ ಆಪ್ ಸರಕಾರದ ಅಬಕಾರಿ ನೀತಿ ಕುರಿತು ಸಿಎಜಿ ವರದಿಯ ತನಿಖೆಗಾಗಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ)ಯನ್ನು ರಚಿಸಬೇಕು ಮತ್ತು ಈ ಹಗರಣದಲ್ಲಿ ಬಿಜೆಪಿ ನಾಯಕರೂ ಭಾಗಿಯಾಗಿರುವ ಆರೋಪಗಳನ್ನು ಸೇರಿಸಲು ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದು ದಿಲ್ಲಿ ಕಾಂಗ್ರೆಸ್ ಘಟಕವು ಬುಧವಾರ ಆಗ್ರಹಿಸಿದೆ.
ಆಪ್ ಸರಕಾರದ ಕಾರ್ಯ ನಿರ್ವಹಣೆ ಕುರಿತು ಉಳಿದ 13 ಸಿಎಜಿ ವರದಿಗಳನ್ನೂ ಮಂಡಿಸಬೇಕು ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚಿಸಬೇಕು ಎಂದೂ ಪ್ರತಿಪಕ್ಷವು ಒತ್ತಾಯಿಸಿದೆ.
2021-22ರ ಮದ್ಯ ನೀತಿ ಕುರಿತು ಸಿಎಜಿ ವರದಿಯನ್ನು ದಿಲ್ಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ನೂತನವಾಗಿ ಚುನಾಯಿತ ವಿಧಾನಸಭೆಯ ಪ್ರಥಮ ಅಧಿವೇಶನದ ಎರಡನೇ ದಿನವೇ ಸದನದಲ್ಲಿ ಮಂಡಿಸಿದ್ದರು. ಮದ್ಯ ನೀತಿಯಿಂದ ದಿಲ್ಲಿ ಸರಕಾರದ ಬೊಕ್ಕಸಕ್ಕೆ 2,000 ಕೋ.ರೂ.ಗಳ ನಷ್ಟವುಂಟಾಗಿದೆ ಎಂದು ವರದಿಯು ಬೆಟ್ಟು ಮಾಡಿದೆ.
ಇಲ್ಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ದಿಲ್ಲಿ ಘಟಕದ ಅಧ್ಯಕ್ಷ ದೇವೇಂದ್ರ ಯಾದವ್ ಅವರು, 'ಮದ್ಯ ಹಗರಣದಲ್ಲಿ ಬಿಜೆಪಿ ನಾಯಕರ ಪಾತ್ರವೂ ಇರುವ ಬಗ್ಗೆ ನಾವು ಸಾಕ್ಷ್ಯಾಧಾರಗಳೊಂದಿಗೆ ಪಕ್ಷವು ತನಿಖಾ ಸಂಸ್ಥೆಗೆ ಲಿಖಿತ ದೂರನ್ನು ಸಲ್ಲಿಸಿದೆ ’ ಎಂದು ತಿಳಿಸಿದರು.
ಮಂಗಳವಾರ ಸದನದಲ್ಲಿ ಎಲ್ಲ 14 ಸಿಎಜಿ ವರದಿಗಳನ್ನು ಏಕೆ ಮಂಡಿಸಲಾಗಿರಲಿಲ್ಲ ಎಂದು ಅವರು ಪ್ರಶ್ನಿಸಿದರು.
‘ಸಿಎಜಿ ವರದಿಯನ್ನು ಪಿಎಸಿ ತನಿಖೆ ಮಾಡಬೇಕು ಎಂದು ನಾವು ಬಯಸಿದ್ದೇವೆ. ವರದಿಯ ತನಿಖೆ ನಡೆಸಲು ಮತ್ತು ಲೂಟಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಶಿಕ್ಷೆಯಾಗುವಂತಾಗಲು ಸಮಿತಿಯನ್ನು ಸಾಧ್ಯವಾದಷ್ಟು ಶೀಘ್ರ ರಚಿಸಬೇಕು ’ಎಂದು ಹೇಳಿದ ಅವರು, ಪಿಎಸಿಗೆ ಪ್ರತಿಪಕ್ಷ ನಾಯಕರು ಅಧ್ಯಕ್ಷರಾಗಿರುತ್ತಾರೆ. ಆದರೆ ದಿಲ್ಲಿಯಲ್ಲಿ ಸರಕಾರವೇ ಈ ಸಮಿತಿಯ ನೇತೃತ್ವವನ್ನು ಹೊಂದಿದೆ. ಹೀಗಾಗಿ ಈ ವರದಿಗಳ ಬಗ್ಗೆ ಬಹಿರಂಗ ಚರ್ಚೆಯೂ ನಡೆಯಬೇಕು ಎಂದರು.
ಕೆಲವು ಪ್ರಮುಖ ಬಿಜೆಪಿ ನಾಯಕರು ಮತ್ತು ಆಗಿನ ಲೆಫ್ಟಿನಂಟ್ ಗವರ್ನರ್ ಪಾತ್ರಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಪ್ರಶ್ನೆಗಳಿದ್ದು, ಸಿಎಜಿ ವರದಿಯಲ್ಲಿ ಇವುಗಳನ್ನು ಕಡೆಗಣಿಸಲಾಗಿದೆ ಎಂದು ಹೇಳಿದ ಯಾದವ್, ಒಂದೇ ವರ್ಷದೊಳಗೆ ಮೂವರು ಅಬಕಾರಿ ನಿರ್ದೇಶಕರನ್ನು ಬದಲಿಸುವ ನಿರ್ಧಾರವನ್ನು ಯಾರು ಮತ್ತು ಏಕೆ ತೆಗೆದುಕೊಂಡಿದ್ದರು? ಮದ್ಯದ ಹೊಸ ಬ್ರ್ಯಾಂಡ್ಗಳಿಗೆ ದಿಲ್ಲಿಯಲ್ಲಿ ಪ್ರಚಾರ ನೀಡಲಾಗಿತ್ತು. ಈ ಬಗ್ಗೆ ತನಿಖೆ ನಡೆಯುವ ಅಗತ್ಯವಿದೆ. ಆಗಿನ ಲೆಫ್ಟಿನಂಟ್ ಗವರ್ನರ್ ಕೇಜ್ರಿವಾಲ್ ಸರಕಾರದ ಮದ್ಯ ನೀತಿ ಅನುಷ್ಠಾನಕ್ಕೆ ಒಪ್ಪಿಗೆ ನೀಡಿದ್ದರು. ಈ ಬಗ್ಗೆ ಈವರೆಗೂ ಏಕೆ ತನಿಖೆ ನಡೆದಿಲ್ಲ ಎಂದು ಪ್ರಶ್ನಿಸಿದರು.
ಮಾಸ್ಟರ್ ಪ್ಲಾನ್ ಉಲ್ಲಂಘಿಸಿ ಮದ್ಯದಂಗಡಿಗಳನ್ನು ತೆರೆಯಲು ಹೇಗೆ ಪರವಾನಿಗೆಗಳನ್ನು ನೀಡಲಾಗಿತ್ತು ಎಂಬ ಬಗ್ಗೆಯೂ ತನಿಖೆ ನಡೆಸುವ ಅಗತ್ಯವಿದೆ ಎಂದು ಯಾದವ್ ಹೇಳಿದರು.
ದಿಲ್ಲಿ ಮಹಾನಗರ ಪಾಲಿಕೆಯ ಅನುಮತಿಯಿಲ್ಲದೆ ಮದ್ಯದಂಗಡಿಗಳನ್ನು ತೆರೆಯಲು ಸಾಧ್ಯವಿಲ್ಲ ಮತ್ತು ಆ ಸಮಯದಲ್ಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು ಎಂದು ಅವರು ಬೆಟ್ಟು ಮಾಡಿದರು.