370ನೇ ವಿಧಿ ರದ್ದತಿ ಬಗ್ಗೆ ಕಾಂಗ್ರೆಸ್, ಮಿತ್ರಪಕ್ಷಗಳು ಕಾಶ್ಮೀರದ ಜನರ ದಾರಿ ತಪ್ಪಿಸುತ್ತಿವೆ : ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ | Photo: PTI
ಶ್ರೀನಗರ : ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು 370ನೇ ವಿಧಿಯನ್ನು ರದ್ದುಗೊಳಿಸಿದ ಬಗ್ಗೆ ಜಮ್ಮು ಹಾಗೂ ಕಾಶ್ಮೀರ ಜನರ ದಾರಿ ತಪ್ಪಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಬಕ್ಷಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಹೇಳಿದ್ದಾರೆ.
2019ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಜಮ್ಮು ಹಾಗೂ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.
ಜಮ್ಮು ಹಾಗೂ ಕಾಶ್ಮೀರ ಅಭಿವೃದ್ಧಿಯ ಹೊಸ ಮೈಲುಗಲ್ಲು ತಲುಪಿದೆ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಜನರು ಮುಕ್ತವಾಗಿ ಉಸಿರಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಜಮ್ಮು ಹಾಗೂ ಕಾಶ್ಮೀರದ ದೇಶದ ಕಿರೀಟ ಎಂದು ಬಣ್ಣಿಸಿದ ಪ್ರಧಾನಿ, ಪ್ರವಾಸೋದ್ಯಮ ಹಾಗೂ ರೈತರ ಸಬಲೀಕರಣದಿಂದ ಅಭಿವೃದ್ಧಿ ಹೊಂದಿದ ಜಮ್ಮು ಹಾಗೂ ಕಾಶ್ಮೀರ ನಿರ್ಮಾಣವಾಗುತ್ತಿದೆ ಎಂದರು.
ಭೇಟಿಯ ಭಾಗವಾಗಿ ಪ್ರಧಾನಿ ಅವರು 6,400 ಕೋಟಿ ರೂ.ಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಅಲ್ಲದೆ, ‘ವಿಕಸಿತ ಭಾರತ್, ವಿಕಸಿತ್ ಜಮ್ಮು ಕಾಶ್ಮೀರ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಜಮ್ಮು ಹಾಗೂ ಕಾಶ್ಮೀರದಲ್ಲಿ ಕೃಷಿ ಆರ್ಥಿಕತೆಗೆ ಪ್ರೋತ್ಸಾಹ ನೀಡಲು ಸುಮಾರು 5,000 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಪ್ರಧಾನಿ ಅವರು ಉದ್ಘಾಟಿಸಿದರು. ‘ಸ್ವದೇಶ್ ದರ್ಶನ್’ ಹಾಗೂ ‘ಪ್ರಸಾದ್’ ಯೋಜನೆ ಅಡಿಯಲ್ಲಿ 1,400 ಕೋಟಿ ರೂ.ಗೂ ಅಧಿಕ ವೆಚ್ಚದ ಪ್ರವಾಸೋದ್ಯಮ ವಲಯಕ್ಕೆ ಸಂಬಂಧಿಸಿದ ರಾಷ್ಟ್ರವ್ಯಾಪಿ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದರು.
ಅವರು ‘ದೇಖೋ ಆಪ್ನಾ ದೇಶ್ ಪೀಪಲ್ಸ್ ಚಾಯ್ಸ್ ಟೂರಿಸ್ಟ್ ಡೆಸ್ಟಿನೇಶನ್ ಪೋಲ್’ ಹಾಗೂ ‘ಚಲೋ ಇಂಡಿಯಾ ಗ್ಲೋಬಲ್ ಡಯಾಸ್ಪೋರಾ’ ಅಭಿಯಾನಕ್ಕೆ ಚಾಲನೆ ನೀಡಿದರು. ಇದರೊಂದಿಗೆ ಚಾಲೆಂಜ್ ಬೆಸ್ಡ್ ಡೆಸ್ಟಿನೇಶನ್ ಡೆವಲಪ್ಮೆಂಟ್ (ಸಿಬಿಡಿಡಿ) ಯೋಜನೆ ಅಡಿಯಲ್ಲಿ ಪ್ರವಾಸಿ ತಾಣಗಳನ್ನು ಘೋಷಿಸಿದರು.
ಜಮ್ಮು ಹಾಗೂ ಕಾಶ್ಮೀರಕ್ಕೆ ನೂತನವಾಗಿ ನೇಮಕರಾದ 1 ಸಾವಿರ ಸರಕಾರಿ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಿಸಿದರು. ಅಲ್ಲದೆ, ಮಹಿಳಾ ಸಾಧಕರು, ರೈತರು ಹಾಗೂ ಉದ್ಯಮಿಗಳು ಸೇರಿದಂತೆ ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಹನ ನಡೆಸಿದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.