ಕ್ರಿಮಿನಲ್ ಕಾನೂನುಗಳ ಜಾಗದಲ್ಲಿ ಬರುವ 3 ಮಸೂದೆಗಳ ವಿಸ್ತೃತ ಸಮಾಲೋಚನೆಗೆ ಕಾಂಗ್ರೆಸ್ ಕರೆ
ರಣದೀಪ್ ಸುರ್ಜೆವಾಲಾ.| Photo : PTI
ಹೊಸದಿಲ್ಲಿ: ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಪುನರ್ರಚನೆಯ ಉದ್ದೇಶದ ಮೂರು ಮಸೂದೆಗಳ ಬಗ್ಗೆ ವ್ಯಾಪಕ ಸಮಾಲೋಚನೆಗಳು ನಡೆಯಬೇಕು ಹಾಗೂ ಇದರಲ್ಲಿ ಪರಿಣತರು ಮತ್ತು ಸಾರ್ವಜನಿಕರು ಭಾಗವಹಿಸಬೇಕು ಎಂದು ಕಾಂಗ್ರೆಸ್ ರವಿವಾರ ಕರೆ ನೀಡಿದೆ.
ಆಗಸ್ಟ್ 11ರಂದು, ಯಾವುದೇ ಪೂರ್ವ ಸೂಚನೆ ಅಥವಾ ಸಾರ್ವಜನಿಕ ಸಮಾಲೋಚನೆ ಇಲ್ಲದೆ ಮತ್ತು ಕಾನೂನು ಪರಿಣತರು, ನ್ಯಾಯ ಪರಿಣತರು, ಅಪರಾಧಶಾಸ್ತ್ರ ಪರಿಣತರು ಮತ್ತು ಸಂಬಂಧಪಟ್ಟ ಇತರರಿಂದ ಸಲಹೆಗಳನ್ನು ಸ್ವೀಕರಿಸದೆ ಮೋದಿ ಸರಕಾರವು ತನ್ನ “ಕಪ್ಪು ಮ್ಯಾಜಿಕ್ ಹ್ಯಾಟ್’’ನಿಂದ ಮೂರು ಮಸೂದೆಗಳನ್ನು ಮಂಡಿಸಿದೆ ಹಾಗೂ ಆ ಮೂಲಕ ದೇಶದ ಇಡೀ ಕ್ರಿಮಿನಲ್ ಕಾನೂನು ವ್ಯವಸ್ಥೆಯನ್ನು “ರಹಸ್ಯವಾಗಿ, ಯಾರಿಗೂ ಗೊತ್ತಾಗದಂತೆ ಅಪಾರದರ್ಶಕವಾಗಿ ಪುನರ್ರಚಿಸಲು ಪ್ರಯತ್ನಿಸಿದೆ ಎಂದು ಹೇಳಿಕೆಯೊಂದರಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.
“ಸ್ವತಃ ಅಮಿತ್ ಶಾ ರಿಗೆ ಈ ಇಡೀ ಪ್ರಕ್ರಿಯೆಯ ಆಳದ ಬಗ್ಗೆ ಅರಿವಿಲ್ಲ ಎನ್ನುವುದು ಅವರ ಪ್ರಾಸ್ತಾವಿಕ ಭಾಷಣದಲ್ಲಿ ಗೊತ್ತಾಯಿತು, ಈ ವಿಷಯದಲ್ಲಿ ಅವರು ಅಜ್ಞಾನಿಯಾಗಿದ್ದಾರೆ ಮತ್ತು ಸಮಗ್ರ ಪ್ರಕ್ರಿಯೆ ಬಗ್ಗೆ ಅವರಲ್ಲಿ ಯಾವ ಕಲ್ಪನೆಯೂ ಇಲ್ಲ’’ ಎಂದು ಕಾಂಗ್ರೆಸ್ ನಾಯಕ ಹೇಳಿದರು.
“ಈ ಪ್ರಕ್ರಿಯೆಯ ಮೂಲಕ, ಅವರು ಯಶಸ್ಸಿನ ಶ್ರೇಯ ಮತ್ತು ಪ್ರಚಾರವನ್ನು ಪಡೆದುಕೊಳ್ಳಲು ಹತಾಶೆಯಿಂದ ಪ್ರಯತ್ನಿಸಬಹುದೇ ಹೊರತು, ಸಾರ್ವಜನಿಕರ ಗಮನ ಅಥವಾ ಸಂಬಂಧಪಟ್ಟವರ ಸಲಹೆಗಳು ಮತ್ತು ಪರಿಣತರ ಅಭಿಪ್ರಾಯಗಳಿಂದ ದೂರವಾಗಿ ನಡೆಸುವ ಈ ಗುಪ್ತ ಕಸರತ್ತಿನಿಂದ ದೇಶದ ಕ್ರಿಮಿನಲ್ ಕಾನೂನು ವ್ಯವಸ್ಥೆಗೆ ಸುಧಾರಣೆ ತರುವ ಉದ್ದೇಶ ಈಡೇರುವುದಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು.
ಭಾರತೀಯ ನ್ಯಾಯ ಸಂಹಿತೆ ಮಸೂದೆ, 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮಸೂದೆ, 2023 ಮತ್ತು ಭಾರತೀಯ ಸಾಕ್ಷ್ಯ ಮಸೂದೆ, 2023ನ್ನು ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದರು. ಈ ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ, 1860; ಕ್ರಿಮಿನಲ್ ಪ್ರೊಸೀಜರ್ ಕಾಯ್ದೆ, 1898; ಮತ್ತು ಇಂಡಿಯನ್ ಎವಿಡೆನ್ಸ್ ಕಾಯ್ದೆ, 1872 ಇವುಗಳ ಸ್ಥಾನಗಳಲ್ಲಿ ಬರುತ್ತವೆ.
ಮಸೂದೆಗಳ ವಿಸ್ತøತ ವಿಶ್ಲೇಷಣೆ ನಡೆಸಿದ ಸುರ್ಜೆವಾಲಾ, ಮಸೂದೆಗಳಲ್ಲಿ ಮಾಡಲಾಗಿರುವ ಬದಲಾವಣೆಗಳ ಬಗ್ಗೆ ಅಮಿತ್ ಶಾ ನೀಡಿರುವ ಹೇಳಿಕೆಗಳನ್ನು ಪ್ರಶ್ನಿಸಿದರು. ಈ ಮಸೂದೆಗಳಿಗೆ ಸಂಬಂಧಿಸಿದ ಹಲವು ವಿಷಯಗಳಲ್ಲಿ ಗೃಹ ಸಚಿವರು “ಸುಳ್ಳು ಹೇಳಿದ್ದಾರೆ ಮತ್ತು ಜನರನ್ನು ತಪ್ಪು ದಾರಿಗೆಳೆದಿದ್ದಾರೆ’’ ಎಂದು ಆರೋಪಿಸಿದರು.
“ಮಸೂದೆಗಳನ್ನು ಸಂಸತ್ನ ಆಯ್ಕೆ ಸಮಿತಿಗೆ ಒಪ್ಪಿಸಿರುವ ಹೊತ್ತಿನಲ್ಲೇ, ಅವುಗಳನ್ನು ಮತ್ತು ಅವುಗಳ ವಿಧಿಗಳನ್ನು ವ್ಯಾಪಕ ಸಾರ್ವಜನಿಕ ಪರಾಮರ್ಶೆಗೆ ಒಳಪಡಿಸಬೇಕು. ನ್ಯಾಯಾಧೀಶರು, ವಕೀಲರು, ನ್ಯಾಯ ಪರಿಣತರು, ಕ್ರಿಮಿನಲ್ ಶಾಸ್ತ್ರ ಪರಿಣತರು, ಸುಧಾರಕರು, ಸಂಬಂಧಪಟ್ಟ ಇತರರು ಮತ್ತು ಸಾರ್ವಜನಿಕರು ಇವುಗಳ ಬಗ್ಗೆ ಚರ್ಚೆ ಮಾಡಬೇಕು. ಈ ಮೂಲಕ, ಯಾವುದೇ ಚರ್ಚೆ ಇಲ್ಲದೆ ಇಡೀ ಕ್ರಿಮಿನಲ್ ಕಾನೂನು ವ್ಯವಸ್ಥೆಯನ್ನು ಧ್ವಂಸಗೊಳಿಸುವ ಪ್ರಯತ್ನವನ್ನು ವಿಫಲಗೊಳಿಸಬೇಕು. ಈ ಪ್ರವೃತ್ತಿ ಬಿಜೆಪಿ ಸರಕಾರದ ವಂಶವಾಹಿಯಲ್ಲೇ ಇದೆ’’ ಎಂದು ಅವರು ಅಭಿಪ್ರಾಯಪಟ್ಟರು.
“ಬಿಜೆಪಿ ಸರಕಾರಕ್ಕೆ ಬುದ್ಧಿ ಬರುತ್ತದೆ ಎಂದು ನಾವು ಆಶಿಸುತ್ತೇವೆ’’ ಎಂದರು.
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಕೂಡ ಮಸೂದೆಗಳ ಬಗ್ಗೆ ವ್ಯಾಪಕ ಸಮಾಲೋಚನೆಗಳು ನಡೆಯಬೇಕೆಂದು ಕರೆ ನೀಡಿದರು.
“ಕಾನೂನು ಮತ್ತು ವ್ಯವಸ್ಥೆಯು ರಾಜ್ಯ ವಿಷಯವಾಗಿದೆ. ಹಾಗಾಗಿ, ಕೆಲವು ಕಾಯ್ದೆಗಳು, ಅದರಲ್ಲೂ ಮುಖ್ಯವಾಗಿ ಸಿಆರ್ಪಿಸಿಗೆ ರಾಜ್ಯಗಳೂ ತಿದ್ದುಪಡಿಗಳನ್ನು ಮಾಡಿವೆ. ಈ ಪ್ರತಿಯೊಂದು ಕಾನೂನುಗಳ ಪ್ರತಿಯೊಂದು ವಿಧಿಗಳ ಬಗ್ಗೆಯೂ ಕಳೆದ 100-150 ವರ್ಷಗಳ ಅವಧಿಯಲ್ಲಿ ವ್ಯಾಪಕ ಕಾನೂನು ಪ್ರಶ್ನೆಗಳು ಎದ್ದಿವೆ. ಪ್ರತಿಯೊಂದು ವಿಧಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎನ್ನುವ ವಿಷಯದ ಕುರಿತ ಚರ್ಚೆಗಳನ್ನು ಪ್ರೈವಿ ಕೌನ್ಸಿಲ್, ಫೆಡರಲ್ ನ್ಯಾಯಾಲಯ, ಸುಪ್ರೀಂ ಕೋರ್ಟ್, ವಿವಿಧ ಹೈಕೋರ್ಟ್ಗಳು ಮತ್ತು ಕೆಲವು ಪ್ರಕರಣಗಳಲ್ಲಿ ಕೆಳ ನ್ಯಾಯಾಲಯಗಳೂ ತಮ್ಮ ತೀರ್ಪುಗಳ ಮೂಲಕ ಇತ್ಯರ್ಥ ಪಡಿಸಿವೆ’’ ಎಂದು ಅವರು ಹೇಳಿದರು.