ಅಜಿತ್ ಪವಾರ್ ಗೆ ಬಿಜೆಪಿ ಮಾಡಿದ 'ಬ್ಲಾಕ್ ಮೇಲ್' ಬಗ್ಗೆ ತನಿಖೆ ನಡೆಸಬೇಕು : ಕಾಂಗ್ರೆಸ್
“ಬಿಜೆಪಿಯ ʼವಾಷಿಂಗ್ ಮೆಷಿನ್ʼ ಮಹಾರಾಷ್ಟ್ರದಲ್ಲಿ ಹೆಚ್ಚು ಪವರ್ ಫುಲ್!”
ಜೈರಾಮ್ ರಮೇಶ್ | Photo : PTI
ಹೊಸದಿಲ್ಲಿ : NCP ನಾಯಕ ಅಜಿತ್ ಪವಾರ್ ಅವರನ್ನು NDA ತೆಕ್ಕೆಗೆ ತರಲು ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಈ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್ ಈ ಕುರಿತು ಮಾತನಾಡಿದ್ದು, ಇದು ಬ್ಲಾಕ್ ಮೇಲ್ ಮಾತ್ರವಲ್ಲ. ಗೌಪ್ಯತೆಯ ಪ್ರಮಾಣ ಮತ್ತು ಅಧಿಕೃತ ರಹಸ್ಯಗಳ ಕಾಯ್ದೆಯ ಉಲ್ಲಂಘನೆಯಾಗಿದೆ. ಬಿಜೆಪಿಯ ʼವಾಷಿಂಗ್ ಮೆಷಿನ್ʼ ಮಹಾರಾಷ್ಟ್ರಕ್ಕಿಂತ ಹೆಚ್ಚು ಬೇರೆ ಯಾವ ರಾಜ್ಯದಲ್ಲೂ ಶಕ್ತಿಶಾಲಿಯಾಗಿರುವಂತೆ ಕಂಡು ಬರುತ್ತಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
2014ರ ಮೊದಲು ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ, ರಾಜ್ಯದ ನೀರಾವರಿ ಮತ್ತು ಜಲಸಂಪನ್ಮೂಲ ಸಚಿವರಾಗಿದ್ದ ಅಜಿತ್ ಪವಾರ್ ಅವರ ವಿರುದ್ಧ ಬೃಹತ್ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಆರೋಪಗಳನ್ನು ಮಾಡಿತ್ತು. 70,000 ಕೋಟಿ ರೂ. ಭ್ರಷ್ಟಾಚಾರದ ಆರೋಪಗಳನ್ನು ಮಾಡಲಾಗಿತ್ತು. ಅಜಿತ್ ಪವಾರ್ ಅವರನ್ನು NDA ಒಕ್ಕೂಟಕ್ಕೆ ಕರೆತರಲು ಬಿಜೆಪಿಯು ಈ ಆರೋಪಗಳನ್ನು ಬಳಸಿ ಬ್ಲಾಕ್ ಮೇಲ್ ಮತ್ತು ಬಲವಂತವನ್ನು ಮಾಡಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಅಜಿತ್ ಪವಾರ್ ಮತ್ತು ಇತರ ಹಲವಾರು ಶಾಸಕರು ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು ತೊರೆದು ಮಹಾರಾಷ್ಟ್ರದಲ್ಲಿ ಶಿವಸೇನೆ- ಬಿಜೆಪಿ ಮೈತ್ರಿ ಜೊತೆ ಸೇರಿಕೊಂಡಿದ್ದರು.
ಬಿಜೆಪಿ ಬ್ಲಾಕ್ ಮೇಲ್ ಮಾಡಿ ಅಜಿತ್ ಪವಾರ್ ರನ್ನು ಎನ್ ಡಿಎ ಒಕ್ಕೂಟಕ್ಕೆ ಸೇರಿಸಿದೆ. ಇದು ದಬ್ಬಾಳಿಕೆ ಮತ್ತು ಬ್ಲಾಕ್ ಮೇಲ್ ಮಾತ್ರವಲ್ಲದೆ ಗೌಪ್ಯತೆ ಮತ್ತು ಅಧಿಕೃತ ರಹಸ್ಯ ಕಾಯಿದೆಯ ಉಲ್ಲಂಘನೆಯಾಗಿರುವುದರಿಂದ ಇದು ಗಂಭೀರ ವಿಷಯವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಸಾಂಗ್ಲಿ ಜಿಲ್ಲೆಯ ತಾಸಗಾಂವ್ ನಲ್ಲಿ ದಿವಂಗತ ಆರ್ ಆರ್ ಪಾಟೀಲ್ ಪುತ್ರ ರೋಹಿತ್ ವಿರುದ್ಧ ಕಣದಲ್ಲಿರುವ NCP ಅಭ್ಯರ್ಥಿ ಸಂಜಯ್ ಕಾಕಾ ಪಾಟೀಲ್ ಪರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಜಿತ್ ಪವಾರ್, ನೀರಾವರಿ ಹಗರಣದಲ್ಲಿ ಬಹಿರಂಗ ತನಿಖೆಗೆ ಆದೇಶಿಸಿದ ಆಗಿನ ಗೃಹ ಸಚಿವ ಆರ್ ಆರ್ ಪಾಟೀಲ್ ಅವರು ಬೆನ್ನಿಗೆ ಚೂರಿ ಹಾಕಿದ್ದರು. ಮುಖ್ಯಮಂತ್ರಿಯಾದ ನಂತರ ಫಡ್ನವೀಸ್ ಅವರು ಗೃಹ ಸಚಿವ ಆರ್ ಆರ್ ಪಾಟೀಲ್ ತನಿಖೆಗೆ ಆದೇಶಿಸಿರುವ ಫೈಲ್ ಅನ್ನು ತೋರಿಸಿದ್ದಾರೆ ಎಂದು ಹೇಳಿದ್ದರು.