ಪಕ್ಷದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ: ಕಾಂಗ್ರೆಸ್ ಆರೋಪ
Photo: PTI
ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ವಾರಗಳಿವೆಯೆನ್ನುವಾಗ ಪಕ್ಷದ ಹಾಗೂ ಅದರ ಯುವ ಘಟಕದ ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕ್ರಮವು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಆತಂಕಕಾರಿ ಹೊಡೆತ ಎಂದು ಕಾಂಗ್ರೆಸ್ ವಕ್ತಾರ ಅಜಯ್ ಮಾಕನ್ ಹೇಳಿದ್ದಾರೆ. ಪಕ್ಷದಿಂದ ಆದಾಯ ತೆರಿಗೆ ಇಲಾಖೆಯು ರೂ. 210 ಕೋಟಿ ತೆರಿಗೆ ಬೇಡಿಕೆ ಇರಿಸಿದೆ, ಇದು ರಾಜಕೀಯ ಪ್ರೇರಿತ ಕ್ರಮವಾಗಿದೆ ಮತ್ತು ಪಕ್ಷದ ಚುನಾವಣಾ ತಯಾರಿಗೆ ಅಡ್ಡಿಯುಂಟು ಮಾಡುವ ಯತ್ನ ಎಂದು ಅವರು ದೂರಿದ್ದಾರೆ.
“ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ, ಇದು ಏಕ-ಪಕ್ಷ ಆಡಳಿತದಂತಿದೆ, ಮುಖ್ಯ ವಿಪಕ್ಷವನ್ನು ದುರ್ಬಲಗೊಳಿಸಲಾಗುತ್ತಿದೆ. ನಾವು ನ್ಯಾಯಾಂಗ, ಮಾಧ್ಯಮ ಮತ್ತು ಜನರಿಂದ ನ್ಯಾಯಕ್ಕಾಗಿ ಕೋರುತ್ತಿದ್ದೇವೆ,”ಎಂದು ಅವರು ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆಯ ಕ್ರಮದ ವಿರುದ್ಧ ಪಕ್ಷ ಕಾನೂನು ಮೊರೆ ಹೋಗಿದೆ. ಈ ವಿಚಾರ ಆದಾಯ ತೆರಿಗೆ ಅಪೀಲು ಟ್ರಿಬ್ಯುನಲ್ ಮುಂದಿದೆ ಎಂದು ಅವರು ಹೇಳಿದರು. ವಿಚಾರಣೆ ಬಾಕಿಯಿರುವುದರಿಂದ ಈ ವಿಚಾರವನ್ನು ಈ ಹಿಂದೆ ಬಹಿರಂಗಪಡಿಸಿರಲಿಲ್ಲ ಎಂದು ಅವರು ಹೇಳಿದರು.
ಬ್ಯಾಂಕ್ ಖಾತೆಗಳ ಮುಟ್ಟುಗೋಲು ನಿನ್ನೆಯಷ್ಟೇ ತಿಳಿದು ಬಂತು. ಒಟ್ಟು ನಾಲ್ಕು ಖಾತೆಗಳು ಬಾಧಿತವಾಗಿವೆ ಎಂದು ಪಕ್ಷದ ವಕೀಲರಾದ ವಿವೇಕ್ ತಂಖ ತಿಳಿಸಿದ್ದಾರೆ ಎಂದು ಮಾಕನ್ ಹೇಳಿದರು. ಕಾಂಗ್ರೆಸದ ಪಕ್ಷದ ಚೆಕ್ಗಳನ್ನು ಸ್ವೀಕರಿಸಬಾರದು ಹಾಗೂ ಅವುಗಳನ್ನು ನಗದೀಕರಿಸಬಾರದು ಎಂದು ಬ್ಯಾಕ್ಗಳಿಗೆ ಸೂಚಿಸಲಾಗಿದೆ ಎಂದೂ ಪಕ್ಷ ಹೇಳಿದೆ.