ಆಸ್ಟ್ರೇಲಿಯಾದಲ್ಲಿ ಶಿಕ್ಷೆಗೊಳಗಾಗಿರುವ ಭಾರತೀಯ ಸಮುದಾಯದ ನಾಯಕನಿಗೆ ಬಿಜೆಪಿ ನಾಯಕರೊಂದಿಗೆ ನಿಕಟ ಸಂಬಂಧ: ಕಾಂಗ್ರೆಸ್ ಆರೋಪ

Credit: Screengrab X/@INCIndia
ಹೊಸದಿಲ್ಲಿ: ಐವರು ಮಹಿಳೆಯರ ಮೇಲೆ ಅತ್ಯಾಚಾರಗಳನ್ನು ಎಸಗಿದ ಆರೋಪದ ಮೇಲೆ ಆಸ್ಟ್ರೇಲಿಯಾದಲ್ಲಿ 40 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಸಮುದಾಯದ ನಾಯಕನು ಪ್ರಧಾನಿ ನರೇಂದ್ರ ಮೋದಿಯವರೊಂದಿಗಿರುವ ಭಾವಚಿತ್ರಗಳನ್ನು ಮಂಗಳವಾರ ಪ್ರದರ್ಶಿಸಿದ ಕಾಂಗ್ರೆಸ್, ಅಪರಾಧಿಯೊಂದಿಗಿನ ಸಂಬಂಧದ ಕುರಿತು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದೆ.
ಉದ್ಯೋಗ ಆಮಿಷದ ಜಾಹೀರಾತುಗಳನ್ನು ಪೋಸ್ಟ್ ಮಾಡಿ ಮಹಿಳೆಯರನ್ನು ಆಕರ್ಷಿಸುತ್ತಿದ್ದ ಅಪರಾಧಿ ಬಾಲೇಶ್ ಧನಖರ್ (43), ನಂತರ ಸಿಡ್ನಿಯಲ್ಲಿರುವ ತನ್ನ ನಿವಾಸದೊಳಗೆ ಅಥವಾ ಅದರ ಬಳಿ ಅವರಿಗೆ ಮತ್ತು ಬರುವ ಔಷಧಗಳನ್ನು ಉಣಿಸುತ್ತಿದ್ದ ಎಂದು Australian Associated Press ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮಹಿಳಾ ಘಟಕದ ಮುಖ್ಯಾಸ್ಥೆ ಅಲ್ಕಾ ಲಂಬಾ, "ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರಗಳು ಭಾರತ ಮತ್ತು ವಿದೇಶಗಳೆರಡರಲ್ಲೂ ವೈರಲ್ ಆಗುತ್ತಿವೆ. ಈ ಭಾವಚಿತ್ರಗಳಲ್ಲಿ ಕಂಡು ಬಂದಿರುವ ವ್ಯಕ್ತಿ ಬಾಲೇಶ್ ಧನಖರ್ ಆಗಿದ್ದಾನೆ” ಎಂದು ಆರೋಪಿಸಿದರು.
“ಈ ಬಾಲೇಶ್ ಧನಖರ್ ಯಾರು? ಆತ ಆಸ್ಟ್ರೇಲಿಯದ ಬಿಜೆಪಿಯ ಸಾಗರೋತ್ತರ ಸ್ನೇಹಿತರ ಘಟಕದ ಮುಖ್ಯಸ್ಥ. ಅತ್ಯಾಚಾರ ಸೇರಿದಂತೆ ಅನೇಕ ಅಮಾನುಷ ಅಪರಾಧಗಳನ್ನು ಎಸಗಿದ ಆರೋಪದ ಮೇಲೆ ಬಾಲೇಶ್ ಧನಖರ್ ಗೆ 40 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ” ಎಂದು ಅವರು ತಿಳಿಸಿದರು.
“ಧನಖರ್ ಬಳಿ ಪ್ರಧಾನಿಯೊಂದಿಗಿನ ಭಾವಚಿತ್ರಗಳಿದ್ದುದರಿಂದ, ಆತ ಉದ್ಯೋಗ ಒದಗಿಸುವ ಸುಳ್ಳು ಜಾಹೀರಾತುಗಳನ್ನು ನೀಡಿದ್ದಾನೆ. ಹೀಗಾಗಿ, ಜನರು ಆತ ನಮಗೆ ಉದ್ಯೋಗ ದೊರಕಿಸಿಕೊಡಬಹುದು ಎಂದು ನಂಬಿದ್ದಾರೆ. ಈ ಪ್ರಕ್ರಿಯೆಯಲ್ಲಿ ಮಹಿಳೆಯರನ್ನು ತನ್ನ ನಿವಾಸಕ್ಕೆ ಆಹ್ವಾನಿಸಿರುವ ಆತ, ಅವರ ಮೇಲೆ ಅತ್ಯಾಚಾರವೆಸಗಿ, ಆ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ ಹಾಗೂ ಅವರನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಆತ ಈ ಕೃತ್ಯವನ್ನು ಐವರು ಮಹಿಳೆಯರ ಮೇಲೆ ಎಸಗಿದ್ದು, ಅದಕ್ಕಾಗಿ ಆತನಿಗೆ ಆಸ್ಟ್ರೇಲಿಯಾದಲ್ಲಿ ಶಿಕ್ಷೆ ವಿಧಿಸಲಾಗಿದೆ” ಎಂದು ಅವರು ಹೇಳಿದರು.
“ಪ್ರಧಾನಿ ನರೇಂದ್ರ ಮೋದಿಗೆ ನಮ್ಮ ಒಂದೇ ಪ್ರಶ್ನೆಯೆಂದರೆ, ಬಾಲೇಶ್ ಧನಖರ್ ನೊಂದಿಗಿನ ನಿಮ್ಮ ಸಂಬಂಧವೇನು? ಆತ ನಿಮಗೆ ಅಷ್ಟು ಆತ್ಮೀಯ ಹೇಗಾದ? ಬಾಲೇಶ್ ಧನಖರ್ ಅಪರಾಧಗಳ ಕುರಿತು ಪ್ರಧಾನಿ ಹಾಗೂ ಅವರ ಕಚೇರಿಗೆ ಏನಾದರೂ ಅರಿವಿತ್ತೆ? ವಾಸ್ತವಗಳು ತಿಳಿದಿದ್ದರೂ, ಪ್ರಧಾನಿ ಹಾಗೂ ಬಿಜೆಪಿ ಇದನ್ನು ಯಾಕೆ ಗೋಪ್ಯವಾಗಿಟ್ಟಿತ್ತು?” ಎಂದು ಅವರು ಸರಣಿ ಪ್ರಶ್ನೆಧಗಳನ್ನು ಒಡ್ಡಿದರು.
ಈ ಕುರಿತು ಬಿಜೆಪಿ ಮೌನ ವಹಿಸುವುದಿಲ್ಲ ಹಾಗೂ ಈ ವಿಷಯದ ಕುರಿತು ಪ್ರತಿಕ್ರಿಯಿಸುವುದು ಎಂಬ ವಿಶ್ವಾಸ ಕಾಂಗ್ರೆಸ್ಸಿಗಿದೆ ಎಂದು ಅವರು ಹೇಳಿದರು.
ಅತ್ಯಾಚಾರ ಆರೋಪದಲ್ಲಿ 40 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲೇಶ್ ಧನಖರ್ ನಂತಹ ಕ್ರಿಮಿನಲ್ ಗಳೊಂದಿಗೆ ಪ್ರಧಾನಿ ಸಂಬಂಧ ಹೊಂದಿರುವುದರಿಂದ ಭಾರತದ ವರ್ಚಸ್ಸಿಗೆ ಧಕ್ಕೆಯಾಗಿದ್ದು, ಈ ಆರೋಪಗಳ ಕುರಿತು ಬಿಜೆಪಿ ಪ್ರತಿಕ್ರಿಯಿಸಬೇಕು ಎಂದು ನಾವು ಬಯಸುತ್ತೇವೆ ಎಂದು ಅವರು ಆಗ್ರಹಿಸಿದರು.
ಆದರೆ, ಈ ಆರೋಪಗಳ ಕುರಿತು ಬಿಜೆಪಿಯಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.