‘ಮೋದಿ ಪರಿವಾರ’ ಮತ್ತು ‘ಗ್ಯಾರಂಟಿ’ ಜಾಹೀರಾತುಗಳ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
Photo: PTI
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರಕ್ಕೆ ಸರಕಾರಿ ಸಂಪನ್ಮೂಲಗಳ ದುರ್ಬಳಕೆಯನ್ನು ಆರೋಪಿಸಿರುವ ಕಾಂಗ್ರೆಸ್ ‘ಮೋದಿ ಪರಿವಾರ’ ಮತ್ತು ‘ಮೋದಿ ಕಿ ಗ್ಯಾರಂಟಿ’ ಜಾಹೀರಾತುಗಳ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಅವುಗಳನ್ನು ತೆಗೆಯುವಂತೆ ಮತ್ತು ಅವುಗಳ ಹಿಂದಿರುವವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವಂತೆ ಅದು ಆಗ್ರಹಿಸಿದೆ.
ಗುರುವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗವು ಬಿಜೆಪಿಯಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳ ಕುರಿತು ದೂರುಗಳನ್ನು ಸಲ್ಲಿಸಿ, ತಕ್ಷಣ ಕ್ರಮಕ್ಕಾಗಿ ಆಗ್ರಹಿಸಿತು.
2ಜಿ ಹಂಚಿಕೆ ವಿಷಯವನ್ನು ಉಲ್ಲೇಖಿಸಿರುವ ಬಿಜೆಪಿಯ ‘ಸುಳ್ಳು ಜಾಹೀರಾತುಗಳ ’ ವಿರುದ್ಧವೂ ದೂರು ಸಲ್ಲಿಸಿದ ಕಾಂಗ್ರೆಸ್ ನಿಯೋಗವು,ಬಿಜೆಪಿಯು ಸಮಗ್ರ ನ್ಯಾಯಾಂಗ ಪ್ರಕ್ರಿಯೆಯ ಮೂಲಕ ವಿಶ್ವಾಸಾರ್ಹವಲ್ಲ ಎಂದು ತಳ್ಳಿ ಹಾಕಲ್ಪಟ್ಟಿರುವ ದಶಕದಷ್ಟು ಹಳೆಯ ನಿರೂಪಣೆಯ ಬೆನ್ನು ಬಿದ್ದಿದೆ ಎಂದು ಆರೋಪಿಸಿದೆ. ಜಾಹೀರಾತನ್ನು ತೆಗೆಯುವಂತೆ ಮತ್ತು ಅದನ್ನು ಬರೆದವರು ಹಾಗೂ ಪ್ರಕಟಿಸಿದವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವಂತೆ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಕೋರಿದೆ.