ದೇಶವನ್ನು ಒಡೆಯಲು ಕಾಂಗ್ರೆಸ್ ಉತ್ತರ-ದಕ್ಷಿಣ ವಿಭಜನೆಯನ್ನು ಸೃಷ್ಟಿಸುತ್ತಿದೆ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ (PTI)
ಹೊಸದಿಲ್ಲಿ: ದೇಶವನ್ನು ವಿಭಜಿಸಲು ಕಾಂಗ್ರೆಸ್ ಉತ್ತರ-ದಕ್ಷಿಣ ವಿಭಜನೆಯನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಇದು ರಾಷ್ಟ್ರದ ಭವಿಷ್ಯವನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ರಾಜ್ಯಸಭೆಯಲ್ಲಿ ಧನ್ಯವಾದ ನಿರ್ಣಯದ ಮೇಲಿನ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಮಾತನಾಡಿದರು. ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಅವರ 'ದಕ್ಷಿಣ ರಾಜ್ಯಗಳಿಗೆ ಪ್ರತ್ಯೇಕ ರಾಷ್ಟ್ರ' ಹೇಳಿಕೆಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ, "ರಾಷ್ಟ್ರವು ನಮಗೆ ಕೇವಲ ಒಂದು ತುಂಡು ಭೂಮಿ ಅಲ್ಲ, ನಮಗೆಲ್ಲರಿಗೂ ಅದು ಸ್ಫೂರ್ತಿದಾಯಕ ಘಟಕವಾಗಿದೆ. ಒಂದು ಅಂಗ ಇಲ್ಲದಿದ್ದರೆ ಇಡೀ ದೇಹವನ್ನು ಅಂಗವಿಕಲ ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ, ದೇಶದ ಒಂದು ಮೂಲೆಯಲ್ಲಿ ಅಭಿವೃದ್ಧಿಯಿಲ್ಲದಿದ್ದರೆ, ದೇಶವು ಅಭಿವೃದ್ಧಿಯಾಗುವುದಿಲ್ಲ. ಇಂದು ದೇಶ ಒಡೆಯಲು ರಾಜಕೀಯ ಸ್ವಾರ್ಥದಿಂದ ಹೊಸ ಕಥೆಗಳನ್ನು ನಿರ್ಮಿಸಲಾಗುತ್ತಿದೆ. ದೇಶಕ್ಕೆ ಇದಕ್ಕಿಂತ ದೊಡ್ಡ ದೌರ್ಭಾಗ್ಯ ಇನ್ನೇನಿದೆ? ಇಂತಹ ಮನಸ್ಥಿತಿ ರಾಷ್ಟ್ರೀಯ ಪಕ್ಷದಿಂದ ಹೊರಬರುತ್ತಿದೆ. ಇದು ದುರದೃಷ್ಟಕರ!...ನಮ್ಮ ತೆರಿಗೆ, ನಮ್ಮ ಹಣ! ಇದು ಯಾವ ಭಾಷೆ? ಇದು ನಮ್ಮ ದೇಶದ ಭವಿಷ್ಯಕ್ಕೆ ಅಪಾಯಕಾರಿ" ಎಂದರು.
ಕಳೆದ ಕೆಲವು ವರ್ಷಗಳಿಂದ ತೆರಿಗೆ ಹಂಚಿಕೆ ಮತ್ತು ಅನುದಾನದಲ್ಲಿ ದಕ್ಷಿಣ ರಾಜ್ಯಕ್ಕೆ ʼಅನ್ಯಾಯʼ ಮಾಡಲಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ರಾಜ್ಯಕ್ಕೆ ಕೇಂದ್ರದ ಅನ್ಯಾಯದ ವಿರುದ್ಧ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ರಾಷ್ಟ್ರ ರಾಜಧಾನಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, "ಅಧಿಕಾರದ ದುರಾಸೆಯಿಂದ ಪ್ರಜಾಪ್ರಭುತ್ವವನ್ನು ಬಹಿರಂಗವಾಗಿ ಕಾಂಗ್ರೆಸ್ ಕತ್ತು ಹಿಸುಕಿ ರಾತ್ರೋರಾತ್ರಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳನ್ನು ವಿಸರ್ಜಿಸಿತು. ನಾಯಕರನ್ನು ಜೈಲಿಗೆ ತಳ್ಳಿತು. ಪತ್ರಿಕೆಗಳಿಗೆ ಬೀಗ ಹಾಕಲು ಯತ್ನಿಸಿತು" ಎಂದು ಹೇಳಿದರು. ಈಗ ಅವರು ಉತ್ತರ ಮತ್ತು ದಕ್ಷಿಣವನ್ನು ಒಡೆಯುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೇ ಕಾಂಗ್ರೆಸ್ ನಮಗೆ ಪ್ರಜಾಪ್ರಭುತ್ವ ಮತ್ತು ಒಕ್ಕೂಟದ ಬಗ್ಗೆ ಉಪನ್ಯಾಸ ನೀಡುತ್ತಿದೆ ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.
ದೇಶದ ಹಳೆಯ ಪಕ್ಷವು ದೇಶದ ದೊಡ್ಡ ಭಾಗವನ್ನು ಶತ್ರುಗಳಿಗೆ ಬಿಟ್ಟುಕೊಟ್ಟಿದೆ. ಆದರೆ ಈಗ ಆಂತರಿಕ ಭದ್ರತೆಯ ಬಗ್ಗೆ ನಮಗೆ ಉಪದೇಶ ನೀಡುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದರು. ದೇಶ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ಗೆ ಅರಿವಿತ್ತು, ಅದನ್ನು ಪರಿಹರಿಸಲು ಏನೂ ಮಾಡಲಿಲ್ಲ ಎಂದು ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಉತ್ತರಿಸುವ ವೇಳೆ ಹೇಳಿದರು.