ಮುನ್ನಡೆಯಲ್ಲಿ ಬಹುಮತದ ಗಡಿ ದಾಟಿದ ಕಾಂಗ್ರೆಸ್: ಬಿ.ಆರ್.ಎಸ್.ಗೆ ಸಂಕಷ್ಟ
ಕೆ.ಚಂದ್ರಶೇಖರ್ ರಾವ್ (source: PTI)
ಹೈದರಾಬಾದ್, ಡಿ.3: ತೆಲಂಗಾಣ ವಿಧಾನಸಭೆಯ 119 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಕಾಂಗ್ರೆಸ್ ಪಕ್ಷ ಅರ್ಧಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ಅಧಿಕಾರಾರೂಢ ಭಾರತ ರಾಷ್ಟ್ರೀಯ ಸಮಿತಿ(BRS)ಗೆ ತೀವ್ರ ಹಿನ್ನಡೆಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಇತ್ತೀಚಿನ ವರದಿಗಳು ಬಂದಾಗ ಕಾಂಗ್ರೆಸ್ ಪಕ್ಷ 67 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಬಿ.ಆರ್.ಎಸ್. 33 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.
ಇದೇ ಪ್ರವೃತ್ತಿ ಮುಂದುವರಿದರೆ, ದೇಶದ ಅತ್ಯಂತ ಯುವ ರಾಜ್ಯದಲ್ಲಿ ಹೊಸ ಆಡಳಿತ ಶಕೆ ಆರಂಭವಾಗಲಿದೆ. 2014ರಲ್ಲಿ ರಾಜ್ಯ ಆರಂಭವಾದ ದಿನದಿಂದ ಬಿಆರ್ಎಸ್ ಇಲ್ಲಿ ಅಧಿಕಾರದಲ್ಲಿದೆ.
ಗೆಲುವಿನ ಸಾಧ್ಯತೆ ನಿಚ್ಚಳ ಎಂದು ಕಾಂಗ್ರೆಸ್ ವಕ್ತಾರ ಲಾವಣ್ಯಾ ಬಲ್ಲಾಳ್ ಜೈನ್ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ನಾವು ಸರ್ಕಾರ ರಚಿಸುವುದು ಖಚಿತ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಆಪರೇಷನ್ ಕಲಮದಂಥ ಕಾರ್ಯಾಚರಣೆಗೆ ಇಳಿಯುವುದಿಲ್ಲ. ಬೇರೆ ಪಕ್ಷಗಳ ಜನ ಅವರಾಗಿಯೇ ಪಕ್ಷ ಸೇರುವುದಾದರೆ ಸ್ವಾಗತ ಎಂದು ಅವರು ಹೇಳಿದ್ದಾರೆ.
ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ 62 ಸ್ಥಾನಗಳು ಲಭ್ಯವಾಗುವ ಸಾಧ್ಯತೆ ಇದ್ದು, ಆಡಳಿತಾರೂಢ ಬಿ.ಆರ್.ಎಸ್. 44 ಸ್ಥಾನಗಳಲ್ಲಿ ಗೆಲ್ಲಲಿದೆ.