ಪ್ರಮುಖ ನಾಯಕರು ಗೈರಾಗಲು ನಿರ್ಧಾರ: ನಾಳೆಯ ಇಂಡಿಯಾ ಮೈತ್ರಿಕೂಟ ಸಭೆ ಮುಂದೂಡಿಕೆ; ವರದಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ನಾಳೆ (ಡಿ.6) ರಾಜಧಾನಿಯಲ್ಲಿ ನಡೆಯಲಿದ್ದ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಭೆಯನ್ನು ಮುಂದೂಡಲಾಗಿದೆ ಎಂಬ ಮಾಹಿತಿಯಿದೆ. ಈ ಸಭೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದರು. ಎಲ್ಲರಿಗೂ ಅನುಕೂಲಕರವಾಗುವ ದಿನಾಂಕದಂದು ಸಭೆ ಮುಂದೆ ನಡೆಯಲಿದೆ ಎಂದು NDTV ವರದಿ ಮಾಡಿದೆ.
ನಾಳೆ ನಡೆಯಲಿದ್ದ ಸಭೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಭಾಗವಹಿಸದೇ ಇರಲು ನಿರ್ಧರಿಸಿದ ಬೆನ್ನಲ್ಲೇ ಸಭೆಯನ್ನು ಮುಂದೂಡಲಾಗಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಈಗಾಗಲೇ ತಾವು ಈ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ತಾವು ಕೂಡ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ. ತಮಿಳುನಾಡು ಚಂಡಮಾರುತ ಮಿಚೌಂಗ್ನಿಂದ ಬಾಧಿತವಾಗಿರುವುದು ಅವರ ನಿರ್ಧಾರಕ್ಕೆ ಕಾರಣವೆನ್ನಲಾಗಿದೆ.
ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಅಥವಾ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿರುವುದೇ ಇತರರ ಅಸಮಾಧಾನಕ್ಕೆ ಕಾರಣವೆನ್ನಲಾಗಿದೆ.
ಕಾಂಗ್ರೆಸ್ ಪಕ್ಷ ಸೀಟು ಹಂಚಿಕೆಗೆ ಒಪ್ಪಿದ್ದೇ ಆದಲ್ಲಿ ಮಧ್ಯಪ್ರದೇಶ, ಛತ್ತೀಸಗಢ ಮತ್ತು ರಾಜಸ್ಥಾನದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದಾಗಿತ್ತು ಅಥವಾ ಬಹುಮತ ಪಡೆಯಬಹುದಾಗಿತ್ತು ಎಂದು ಅಖಿಲೇಶ್ ಯಾದವ್ ಮತ್ತು ಮಮತಾ ಬ್ಯಾನರ್ಜಿ ಈಗಾಗಲೇ ಹೇಳಿದ್ದಾರೆ.