ಕೇಂದ್ರ ಸಚಿವರ ಬೆದರಿಕೆ ಹೇಳಿಕೆಗಳ ವಿರುದ್ಧ ಕ್ರಮಕ್ಕೆ ಲೋಕಸಭಾ ಸ್ಪೀಕರ್ಗೆ ಕಾಂಗ್ರೆಸ್ ಆಗ್ರಹ
ಲೋಕಸಭಾ ಸ್ಪೀಕರ್ ಓಂ ಬಿರ್ಲಾ | PTI
ಹೊಸದಿಲ್ಲಿ : ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ರವಿವಾರ ಪತ್ರವನ್ನು ಬರೆದಿರುವ ಕಾಂಗ್ರೆಸ್ ನಾಯಕ ಗೌರವ್ ಗೊಗೊಯಿ ಅವರು ಸದನದಲ್ಲಿ ಕೇಂದ್ರ ಸಚಿವರು ಮತ್ತು ಆಡಳಿತಾರೂಢ ಎನ್ಡಿಎ ಸದಸ್ಯರ ಸಂಸದೀಯ ನಡವಳಿಕೆ ಕೆಳಮಟ್ಟಕ್ಕೆ ಇಳಿಯುತ್ತಿರುವ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.
ಹೆಚ್ಚಾಗಿ ಸರಕಾರದ ಸಚಿವರೇ ಪ್ರತಿಪಕ್ಷಗಳ ವಿರುದ್ಧ ಅಸಂಸದೀಯ,ಆಕ್ಷೇಪಾರ್ಹ ಮತ್ತು ಬೆದರಿಕೆಯ ಟೀಕೆಗಳನ್ನು ಮಾಡುತ್ತಾರೆ ಎಂದು ಆರೋಪಿಸಿರುವ ಗೊಗೊಯಿ,ಇಂತಹ ಸಚಿವರು ಮತ್ತು ಸಂಸದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕರಾಗಿರುವ ಗೊಗೊಯಿ ತನ್ನ ಹೇಳಿಕೆಯನ್ನು ಸಮರ್ಥಿಸಲು ಮೂರು ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ.
ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ ಅವರು ಶುಕ್ರವಾರ ಲೋಕಸಭಾ ಸದಸ್ಯರಲ್ಲದ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ವಿರುದ್ಧ ಬೆದರಿಕೆಯ ಭಾಷೆಯನ್ನು ಬಳಸಿದ್ದರು. ಗುರುವಾರ ಕೇಂದ್ರ ಸಹಾಯಕ ಸಚಿವ ರವನೀತ್ ಸಿಂಗ್ ಬಿಟ್ಟು ಅವರು ರಾಜ್ಯಸಭಾ ಸದಸ್ಯೆ ಹಾಗೂ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಉಲ್ಲೇಖಿಸುವಾಗ ಅಸಂಸದೀಯ ಭಾಷೆಯನ್ನು ಬಳಸಿದ್ದರು ಮತ್ತು ಅದೇ ದಿನ ಬಿಜೆಪಿ ಸಂಸದ ನಿಶಿಕಾಂತ್ ದುಬೆಯವರು ಸದನದಲ್ಲಿ ತನ್ನ ಮಧ್ಯಪ್ರವೇಶಗಳ ಸಂದರ್ಭ ಸಂಪೂರ್ಣ ಕೋಮುವಾದಿ ಭಾಷೆಯನ್ನು ಬಳಸಿದ್ದರು ಎಂದು ಗೊಗೊಯಿ ಪತ್ರದಲ್ಲಿ ಬೆಟ್ಟು ಮಾಡಿದ್ದಾರೆ.
ಗೊಗೊಯಿ ತನ್ನ ಪತ್ರದಲ್ಲಿ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ಉಪಸ್ಥಿತರಿದ್ದರಾದರೂ ಎನ್ಡಿಎ ಸದಸ್ಯರು ಇಂತಹ ಹೇಳಿಕೆಗಳನ್ನು ನೀಡುವುದನ್ನು ನಿರ್ಬಂಧಿಸಿರಲಿಲ್ಲ ಎಂದು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಸದನವು ಸುಗಮವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು ಸಾಮೂಹಿಕ ಜವಾಬ್ದಾರಿಯಾಗಿದೆ, ಆದರೆ ಸರಕಾರವು ಪೂರ್ವಭಾವಿ ಮತ್ತು ಸಹಯೋಗದ ನಿಲುವು ಹೊಂದಿರುವುದು ಮುಖ್ಯವಾಗಿದೆ ಎಂದು ಹೇಳಿರುವ ಗೊಗೊಯಿ, ಬಿಜೆಪಿ ನೇತೃತ್ವದ ಎನ್ಡಿಎ ಸರಕಾರವು ಸದನದ ಕಾರ್ಯವಿಧಾನಗಳು, ರೀತಿನೀತಿಗಳು ಮತ್ತು ಶಿಷ್ಟಾಚಾರಗಳನ್ನು ನಿರಂತರವಾಗಿ ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.
ಸದನದ ಪ್ರತಿಯೊಬ್ಬ ಸದಸ್ಯರೂ ತಮ್ಮ ಕ್ಷೇತ್ರದ ಧ್ವನಿಗಳನ್ನು ಪ್ರತಿನಿಧಿಸುವ ಸಮಾನ ಹೊಣೆಗಾರಿಕೆಯನ್ನು ಹೊಂದಿದ್ದಾರೆ. ಭಿನ್ನಾಭಿಪ್ರಾಯವು ಅಗೌರವಕ್ಕೆ ಕಾರಣವಾಗಬಾರದು ಎಂದು ಹೇಳಿರುವ ಗೊಗೊಯಿ, ಯಾವುದೇ ಸದಸ್ಯರು ಸಂಸತ್ತಿನ ನಿಯಮಗಳನ್ನು ಉಲ್ಲಂಘಿಸದಂತೆ ನೋಡಿಕೊಳ್ಳುವಂತೆ ಸ್ಪೀಕರ್ರನ್ನು ಆಗ್ರಹಿಸಿದ್ದಾರೆ.