ಮೋದಿ ಪರಿವಾರ, ಗ್ಯಾರೆಂಟಿ ಜಾಹೀರಾತುಗಳ ವಿರುದ್ಧ ಕಾಂಗ್ರೆಸ್ ದೂರು
ಹೊಸದಿಲ್ಲಿ: ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರಿ ಸಂಪನ್ಮೂಲವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಮೋದಿ ಪರಿವಾರ ಮತ್ತು ಮೋದಿ ಕೀ ಗ್ಯಾರೆಂಟಿ ಜಾಹೀರಾತುಗಳ ವಿರುದ್ಧ ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವ ಪಕ್ಷ, ಈ ಜಾಹೀರಾತುಗಳನ್ನು ತೆರವುಗೊಳಿಸಲು ಮತ್ತು ಇದರ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಕಾಂಗ್ರೆಸ್ ಮುಖಂಡರ ನಿಯೋಗ ಈ ಸಂಬಂಧ ಚುನಾವಣಾ ಆಯೋಗವನ್ನು ಭೇಟಿ ಮಾಡಿ, ಬಿಜೆಪಿಯಿಂದ ಆಗಿದೆ ಎನ್ನಲಾದ ಮಾದರಿ ನೀತಿಸಂಹಿತೆ ಉಲ್ಲಂಘನೆ ವಿರುದ್ಧ ದೂರು ನೀಡಿದೆ. ಜತೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಿದೆ.
ಬಿಜೆಪಿಯ ಸುಳ್ಳು ಜಾಹೀರಾತುಗಳ ವಿರುದ್ಧವೂ ಕಾಂಗ್ರೆಸ್ ನಿಯೋಗ ದೂರು ನೀಡಿದೆ. ದಶಕಗಳ ಹಿಂದಿನ 2ಜಿ ಹಂಚಿಕೆ ವಿವಾದವನ್ನು ಜಾಹೀರಾತಿನಲ್ಲಿ ವಿವರಿಸುವ ಮೂಲಕ ಸಮಗ್ರ ನ್ಯಾಯಾಂಗ ಪ್ರಕ್ರಿಯೆಗೆ ಅಗೌರವ ತೋರಿದೆ ಎಂದು ಆಪಾದಿಸಿದೆ.
ಈ ಜಾಹೀರಾತುಗಳನ್ನು ತೆರವುಗೊಳಿಸಬೇಕು ಹಾಗೂ ಇದರ ಕರ್ತೃಗಳು ಮತ್ತು ಪ್ರಕಾಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂತೆಯೇ ಸರಕಾರಿ ಸಂಪನ್ಮೂಲ ಬಳಕೆ ಮಾಡಿಕೊಂಡಿರುವ 'ಮೋದಿ ಪರಿವಾರ' ಜಾಹೀರಾತನ್ನೂ ತೆರವುಗೊಳಿಸಬೇಕು ಎಂದು ಮನವಿ ಮಾಡಿದೆ.