ರೈಲು ಸುರಕ್ಷತೆ ಬಗ್ಗೆ ಕಾಂಗ್ರೆಸ್ ಜನರಲ್ಲಿ ಭಯ ಹುಟ್ಟಿಸುತ್ತಿದೆ : ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಆಕ್ರೋಶ
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ | PC :X
ಹೊಸದಿಲ್ಲಿ : ಹೆಚ್ಚುತ್ತಿರುವ ರೈಲು ಅಪಘಾತಗಳು ಮತ್ತು ದೇಶದಲ್ಲಿನ ರೈಲ್ವೇ ಸೇವೆಗಳ ಸ್ಥಿತಿಗತಿ ಬಗ್ಗೆ ಪ್ರತಿಪಕ್ಷಗಳು ವ್ಯಕ್ತಪಡಿಸಿರುವ ಕಳವಳಗಳ ಬಗ್ಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಕಿಡಿಕಾರಿದ್ದಾರೆ.
‘‘58 ವರ್ಷಗಳ ಕಾಲ ಅಧಿಕಾರದಲ್ಲಿದ್ದವರಿಗೆ, ಒಂದು ಕಿಲೋಮೀಟರ್ನಷ್ಟಾದರೂ ಸ್ವಯಂಚಾಲಿತ ರೈಲು ರಕ್ಷಣೆ (ಎಟಿಪಿ) ವ್ಯವಸ್ಥೆಯನ್ನು ಅಳವಡಿಸಲು ಯಾಕೆ ಸಾಧ್ಯವಾಗಿಲ್ಲ ಎಂದು ಕೇಳಬೇಕಾಗಿದೆ. ಇಂದು, ಅವರು ಪ್ರಶ್ನೆಗಳನ್ನು ಕೇಳುವ ಧೈರ್ಯ ಮಾಡುತ್ತಿದ್ದಾರೆ’’ ಎಂದು ಲೋಕಸಭೆಯಲ್ಲಿ ವೈಷ್ಣವ್ ಹೇಳಿದರು.
‘‘ಮಮತಾ ಬ್ಯಾನರ್ಜಿ ರೈಲ್ವೇ ಸಚಿವೆಯಾಗಿದ್ದಾಗ, ಅಪಘಾತಗಳ ಸಂಖ್ಯೆ 0.24ರಿಂದ 0.19ಕ್ಕೆ ಇಳಿದಿದೆ ಎಂದು ಅವರು ಹೇಳುವಾಗ ಈ ಜನರು ಸದನದಲ್ಲಿ ಚಪ್ಪಾಳೆ ಬಡಿಯುತ್ತಿದ್ದರು. ಇಂದು ಅಪಘಾತಗಳ ಸಂಖ್ಯೆ 0.19ರಿಂದ 0.03ಕ್ಕೆ ಇಳಿದಾಗ, ಅವರು ಇಂಥ ಆರೋಪಗಳನ್ನು ಮಾಡುತ್ತಿದ್ದಾರೆ’’ ಎಂದು ಅವರು ಹೇಳಿದರು.
ಕಾಂಗ್ರೆಸ್ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿಯನ್ನು ಹರಡುತ್ತಿದೆ ಮತ್ತು ಲಕ್ಷಾಂತರ ದೈನಂದಿನ ರೈಲು ಪ್ರಯಾಣಿಕರಲ್ಲಿ ಅನಗತ್ಯ ಹೆದರಿಕೆಯನ್ನು ತುಂಬುತ್ತಿದೆ ಎಂದು ರೈಲ್ವೇ ಸಚಿವರು ಆರೋಪಿಸಿದರು.
‘‘ಈ ದೇಶ ಹೀಗೆ ನಡೆಯುತ್ತದೆಯೇ? ಕಾಂಗ್ರೆಸ್ ಸಾಮಾಜಿಕ ಮಾಧ್ಯಮಗಳಲ್ಲಿರುವ ತನ್ನ ಟ್ರೋಲ್ ಸೇನೆಯ ನೆರವಿನಿಂದ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಪ್ರತಿ ದಿನ ರೈಲಿನಲ್ಲಿ ಪ್ರಯಾಣಿಸುವ 2 ಕೋಟಿ ಜನರ ಹೃದಯಗಳಲ್ಲಿ ಅವರು ಹೆದರಿಕೆಯನ್ನು ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆಯೇ’’ ಎಂದು ಅವರು ಪ್ರಶ್ನಿಸಿದರು.
ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕ ಗೌರವ್ ಗೊಗೋಯ್, ರೈಲ್ವೇ ಸಚಿವರು ವೈಫಲ್ಯದ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಹಾಗೂ ಬದಲಿಗೆ, ಎಲ್ಲದಕ್ಕೂ ಹಿಂದಿನ ಸರಕಾರಗಳನ್ನು ಹೊಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
‘‘ಇಂದು ನಾವು ಹೊಸ ಸಂಪ್ರದಾಯವೊಂದನ್ನು ನೋಡುತ್ತಿದ್ದೇವೆ. ಬಿಜೆಪಿ ಸಚಿವರು ನೈತಿಕ ಹೊಣೆಯನ್ನು ಹೊತ್ತುಕೊಳ್ಳುತ್ತಿಲ್ಲ, ಬದಲಿಗೆ ಎಲ್ಲದಕ್ಕೂ ಇತಿಹಾಸವನ್ನು ಹೊಣೆ ಮಾಡುತ್ತಿದ್ದಾರೆ’’ ಎಂದು ಸದನದಿಂದ ಹೊರನಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.