ಕಾಂಗ್ರೆಸ್ ಬುಡಕಟ್ಟು ಜನರ ಜಲ, ಅರಣ್ಯ ಮತ್ತು ಭೂಮಿಯನ್ನು ಬೆಂಬಲಿಸುತ್ತಿದೆ : ರಾಹುಲ್ ಗಾಂಧಿ
ರಾಹುಲ್ ಗಾಂಧಿ | Photo: PTI
ಧನಬಾದ್(ಜಾರ್ಖಂಡ್): ತನ್ನ ಪಕ್ಷವು ಬುಡಕಟ್ಟು ಜನರ ಜಲ,ಅರಣ್ಯ ಮತ್ತು ಭೂಮಿ ಹಾಗೂ ಯುವಜನರಿಗೆ ಉದ್ಯೋಗಕ್ಕೆ ಬೆಂಬಲವಾಗಿ ನಿಂತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರವಿವಾರ ಹೇಳಿದರು.
ತನ್ನ ಭಾರತ ಜೋಡೊ ನ್ಯಾಯ ಯಾತ್ರೆಯ ಅಂಗವಾಗಿ ಧನಬಾದ್ ಜಿಲ್ಲೆಯಲ್ಲಿ ರೋಡ್ ಶೋ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಬುಡಕಟ್ಟು ಜನರ ಜಲ, ಅರಣ್ಯ ಮತ್ತು ಭೂಮಿಯ ಪರವಾಗಿ ನಿಂತಿದೆ ಮತ್ತು ಯುವಜನರ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಶ್ರಮಿಸುತ್ತಿದೆ. ಆರ್ಥಿಕ ಅಸಮತೋಲನ, ನೋಟು ನಿಷೇಧ, ಜಿಎಸ್ಟಿ ಮತ್ತು ನಿರುದ್ಯೋಗ ದೇಶದ ಯುವಜನರ ಭವಿಷ್ಯವನ್ನು ಹಾಳು ಮಾಡಿವೆ ಎಂದು ಹೇಳಿದರು.
ಶನಿವಾರ ರಾತ್ರಿ ಜಿಲ್ಲೆಯ ಟುಂಡಿ ಬ್ಲಾಕ್ ನಲ್ಲಿ ತಂಗಿದ್ದ ಯಾತ್ರೆಯು ರವಿವಾರ ಬೆಳಿಗ್ಗೆ ಧನಬಾದ್ ನಗರದ ಗೋವಿಂದಪುರದಿಂದ ಆರಂಭಗೊಂಡಿತು. ರವಿವಾರ ಜಾರ್ಖಂಡ್ ನಲ್ಲಿ ಯಾತ್ರೆಯ ಮೂರನೇ ದಿನವಾಗಿತ್ತು.
ಯಾತ್ರೆಯು ಜಾರ್ಖಂಡ್ ನಲ್ಲಿ ಎರಡು ಹಂತಗಳಲ್ಲಿ ಎಂಟು ದಿನಗಳ ಅವಧಿಯಲ್ಲಿ ರಾಜ್ಯದ 13 ಜಿಲ್ಲೆಗಳ ಮೂಲಕ 804 ಕಿ.ಮೀ.ದೂರವನ್ನು ಕ್ರಮಿಸಲಿದೆ.