ಕಾಂಗ್ರೆಸ್ ದೇಶವನ್ನು ಹಿಂದಕ್ಕೆ ಒಯ್ಯುತ್ತಿದೆ: ಪ್ರಧಾನಿ ಮೋದಿ
ಮೋದಿ | Photo: PTI
ಭೋಪಾಲ್: ಕಾಂಗ್ರೆಸ್ ನಕಾರಾತ್ಮಕತೆಯನ್ನು ಹರಡುತ್ತದೆ. ಅವರು ದೇಶದ ಅಭಿವೃದ್ಧಿಯನ್ನು ಸಹಿಸುವುದಿಲ್ಲ. ಅವರು ದೇಶವನ್ನು 20ನೇ ಶತಮಾನದತ್ತ ಹಿಂದಕ್ಕೆ ಒಯ್ಯುತ್ತಿದ್ದಾರೆ ಎಂದು ಮೋದಿ ಆರೋಪಿಸಿದ್ದಾರೆ.
ಶೀಘ್ರದಲ್ಲೇ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಸೋಮವಾರ ಬೃಹತ್ ಬಿಜೆಪಿ ಕಾರ್ಯಕರ್ತ ಮಹಾಕುಂಭವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
‘‘ಕಾಂಗ್ರೆಸ್ ಮೊದಲು ಪತನಗೊಂಡಿತು, ಬಳಿಕ ದಿವಾಳಿ ಆಯಿತು ಮತ್ತು ಈಗ ತನ್ನನ್ನು ನಡೆಸಲು ಇತರರಿಗೆ ಗುತ್ತಿಗೆ ಕೊಟ್ಟಿದೆ. ಪಕ್ಷವನ್ನು ಈಗ ಅದರ ನಾಯಕರು ನಡೆಸುತ್ತಿಲ್ಲ. ಅದು ಈಗ ಕಂಪೆನಿಯಾಗಿ ಬದಲಾಗಿದೆ. ಅದು ಈಗ ಘೋಷಣೆಗಳಿಂದ ಹಿಡಿದು ನೀತಿಗಳು ಮತ್ತು ನಗರ ನಕ್ಸಲರವರೆಗೆ ಎಲ್ಲವನ್ನೂ ಹೊರಗಿನಿಂದ ತರಿಸಿಕೊಳ್ಳುತ್ತಿದೆ. ಕಾಂಗ್ರೆಸನ್ನು ಈಗ ನಡೆಸುತ್ತಿರುವವರು ನಗರ ನಕ್ಸಲರು. ಪಕ್ಷದ ನಿಜವಾದ ತಳಮಟ್ಟದ ನಾಯಕರು ಇದನ್ನು ವೌನವಾಗಿ ಮತ್ತು ಅಸಹಾಯಕತೆಯಿಂದ ನೋಡುತ್ತಿದ್ದಾರೆ’’ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದ ಅವರು, ಕಾಂಗ್ರೆಸ್ಸನ್ನು ‘ತುಕ್ಕು ಹಿಡಿದ ಕಬ್ಬಿಣ’’ಕ್ಕೆ ಹೋಲಿಸಿದರು. ತುಕ್ಕು ಹಿಡಿದ ಕಬ್ಬಿಣವು ಮಳೆಯಲ್ಲಿ ನಿಧಾನವಾಗಿ ಕರಗುತ್ತದೆ. ಕಾಂಗ್ರೆಸಿಗೆ ದೂರದೃಷ್ಟಿಯಿಲ್ಲ. ಅದಕ್ಕೆ ಇನ್ನೊಂದು ಅವಕಾಶವನ್ನು ಕೊಟ್ಟರೆ, ರಾಜ್ಯವನ್ನು ಮತ್ತೆ ಕಾಯಿಲೆಪೀಡಿತ ವರ್ಗಕ್ಕೆ ಸೇರಿಸುತ್ತದೆ ಎಂದರು.