ಲೋಕಸಭೆಯಲ್ಲಿ ಮಾನಹಾನಿಕರ ಹೇಳಿಕೆ ಆರೋಪ | ಕೇಂದ್ರ ಸಚಿವ ಪಿಯೂಶ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದ ಕಾಂಗ್ರೆಸ್
ಕೇಂದ್ರ ಸಚಿವ ಪಿಯೂಷ್ ಗೋಯೆಲ್ | PTI
ಹೊಸದಿಲ್ಲಿ : ಹಂಗೇರಿಯನ್-ಅಮೆರಿಕನ್ ಉದ್ಯಮಿ ಹಾಗೂ ದಾನಿ ಜಾರ್ಜ್ಸ ಸೊರೊಸ್ ಅವರೊಂದಿಗೆ ಪ್ರತಿಪಕ್ಷಗಳಿಗೆ ನಂಟು ಕಲ್ಪಿಸುವಂತಹ ‘ಮಾನಹಾನಿಕರ ಹಾಗೂ ಘನತೆರಹಿತ’ ಹೇಳಿಕೆಗಳನ್ನು ನೀಡಿದ್ದಾರೆಂದು ಆರೋಪಿಸಿ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ವಿರುದ್ಧ ಕಾಂಗ್ರೆಸ್ ಪಕ್ಷವು ಶುಕ್ರವಾರ ಹಕ್ಕುಚ್ಯುತಿ ನೋಟಿಸ್ ಜಾರಿಗೊಳಿಸಿದೆ.
ಕಾಂಗ್ರೆಸ್ ಪಕ್ಷವು ದೇಶವನ್ನು ಅಸ್ಥಿರಗೊಳಿಸುತ್ತದೆಯೆಂದು ಆರೋಪಿಸಿರುವ ಕೇಂದ್ರ ಸಚಿವ ಗೋಯಲ್ ವಿರುದ್ಧ ಹಕ್ಕುಚ್ಯುತಿ ಕಲಾಪಗಳನ್ನು ಉಪಕ್ರಮಿಸಬೇಕೆಂದು ಕಾಂಗ್ರೆಸ್ ಸಂಸದ ಮಾಣಿಕಂ ಟಾಗೋರ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಿರುವ ನೋಟಿಸ್ನಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಪಕ್ಷವು ಉದ್ಯಮಿ ಜಾರ್ಜ್ ಸೊರೊಸ್ ಜೊತೆ ಸೇರಿಕೊಂಡು ಸಂಚು ಹೂಡಿದೆಯೆಂಬ ಆರೋಪವನ್ನು ಆಡಳಿತಾರೂಢ ಬಿಜೆಪಿಯು ಪುನರುಚ್ಛರಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಂಸತ್ ನ ಉಭಯ ಸದನಗಳಲ್ಲಿ ಗದ್ದಲ ತಾಂಡವವಾಡುತ್ತಿದೆ.
ಮಣಿಪುರದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ತನ್ನ ವೈಫಲ್ಯಗಳನ್ನು ಮರೆ ಮಾಚಲು ಕೇಂದ್ರ ಸರಕಾರವು ಸೊರೋಸ್ ಅವರನ್ನು ಗುರಾಣಿಯಾಗಿ ಕೇಂದ್ರ ಸರಕಾರವು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಬುಧವಾರ ಲೋಕಸಭೆಯಲ್ಲಿ ಆಪಾದಿಸಿದ್ದರು.
ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿ ಸದನದಲ್ಲಿ ಹೇಳಿಕೆ ನೀಡಿದ ಸಂದರ್ಭ ಗೋಯಲ್ ಅವರು ಜಾರ್ಜ್ ಸೊರೊಸ್ ಅವರಿಗೂ ಹಾಗೂ ಈ ಎಲ್ಲಾ ಆಂತರಿಕ ಗಲಭೆಗಳಿಗೂ ಯಾವ ಸಂಬಂಧವಿದೆಯೆಂಬ ಬಗ್ಗೆ ಕಾಂಗ್ರೆಸ್ ಪಕ್ಷವು ಉತ್ತರಿಸಬೇಕಾಗಿದೆ ಹಾಗೂ ಅದನ್ನು ದೇಶವು ಅರಿತುಕೊಳ್ಳಬೇಕಾಗಿದೆ ಎಂದು ಗೋಯಲ್ ಹೇಳಿರುವುದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು..
ದೇಶದಲ್ಲಿನ ಆಂತರಿಕ ಪ್ರಕ್ಷೋಭೆಗಳಿಗೆ ಕಾಂಗ್ರೆಸ್ ಪಕ್ಷವು ಹೊಣೆಗಾರನಾಗಿದೆ ಹಾಗೂ ಹಾಗೆ ಮಾಡಲು ಅದು ವಿದೇಶಿ ಶಕ್ತಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಗೋಯಲ್ ಸದನದಲ್ಲಿ ಆಪಾದಿಸಿದ್ದರು.
ಮಣಿಪುರದಲ್ಲಿನ ಪ್ರಸಕ್ತ ಪರಿಸ್ಥಿತಿಗೆ ಕಾಂಗ್ರೆಸ್ ಸಂಪೂರ್ಣ ಹೊಣೆಗಾರನಾಗಿದೆ. ಕಾಂಗ್ರೆಸ್ ಪಕ್ಷ ಹಾಗೂ ಜಾರ್ಜ್ ಸೊರೊಸ್ರಿಂದ ಹಣಕಾಸು ನೆರವು ಪಡೆಯುವ ಸಂಘಟನೆಗಳಿಂದಾಗಿ ಭಾರತೀಯ ಆರ್ಥಿಕತೆಯನ್ನು ಅಸ್ಥಿರಗೊಳಿಸಲಾಗುತ್ತಿದೆ ಎಂದು ಸಚಿವ ಗೋಯಲ್ ಆಪಾದಿಸಿದ್ದರು.