ಆಪ್ ತನ್ನ ಚಲನವಲನದ ಮೇಲೆ ಕಣ್ಣಿರಿಸಿದೆ ಎಂದು ಕಾಂಗ್ರೆಸ್ ನಾಯಕ ಸಂದೀಪ ದೀಕ್ಷಿತ್ ಆರೋಪ: ತನಿಖೆಗೆ ಆದೇಶಿಸಿದ ದಿಲ್ಲಿ ಲೆಫ್ಟಿನಂಟ್ ಗವರ್ನರ್
ಸಂದೀಪ ದೀಕ್ಷಿತ್ | ANI
ಹೊಸದಿಲ್ಲಿ: ಆಪ್ ತನ್ನ ಚಲನವಲನಗಳ ಮೇಲೆ ಕಣ್ಣಿರಿಸಿದೆ ಮತ್ತು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಪಂಜಾಬಿನಿಂದ ಭಾರೀ ಪ್ರಮಾಣದಲ್ಲಿ ನಗದು ಹಣವನ್ನು ನಗರಕ್ಕೆ ತರಲಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕ ಸಂದೀಪ ದೀಕ್ಷಿತ ಅವರ ಆರೋಪಗಳ ಕುರಿತು ತನಿಖೆಗೆ ದಿಲ್ಲಿಯ ಲೆಫ್ಟಿನಂಟ್ ಗವರ್ನರ್(ಎಲ್ಜಿ) ವಿ.ಕೆ.ಸಕ್ಸೇನಾ ಅವರು ಆದೇಶಿಸಿದ್ದಾರೆ.
ಡಿ.೨೫ರಂದು ಸಕ್ಸೇನಾರಿಗೆ ಬರೆದಿದ್ದ ಪತ್ರದಲ್ಲಿ ದೀಕ್ಷಿತ,ದಿಲ್ಲಿಯ ತನ್ನ ನಿವಾಸದ ಹೊರಗೆ ‘ಪಂಜಾಬ್ ಸರಕಾರದ’ ಗುಪ್ತಚರ ಸಿಬ್ಬಂದಿಗಳ ಉಪಸ್ಥಿತಿಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದರು. ಈ ಸಿಬ್ಬಂದಿಗಳಿಗೆ ಸಂಬಂಧಿಸಿದ ‘ಅಧಿಕೃತ ವಾಹನಗಳು’ ತನ್ನ ನಿವಾಸದ ಹೊರಗೆ ಆಗಾಗ್ಗೆ ಕಂಡು ಬರುತ್ತಿದ್ದು,ಇದು ಕಣ್ಗಾವಲು ಮತ್ತು ಬೆದರಿಕೆಯನ್ನು ಸೂಚಿಸುತ್ತಿದೆ ಎಂದು ಅವರು ಆರೋಪಿಸಿದ್ದರು.
ಈ ಆರೋಪಗಳಿಗೆ ಆಪ್ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ. ದಿಲ್ಲಿ ಮತ್ತು ಪಂಜಾಬ್ಗಳಲ್ಲಿ ಆಪ್ ಸರಕಾರಗಳಿವೆ.
ಈ ಆರೋಪಗಳ ಕುರಿತು ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸಕ್ಸೇನಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಚುನಾವಣೆಗೆ ಮುನ್ನ ಮತದಾರರ ಮೇಲೆ ಪ್ರಭಾವ ಬೀರಲು ಪಂಜಾಬ್ ಸರಕಾರವು ಭಾರೀ ಪ್ರಮಾಣದಲ್ಲಿ ಹಣವನ್ನು ರವಾನಿಸುತ್ತಿದೆ. ಪಂಜಾಬ್ ಪೋಲಿಸರ ಬೆಂಗಾವಲು ಹೊಂದಿರುವ ಖಾಸಗಿ ವಾಹನಗಳು ಹರ್ಯಾಣ ಮತ್ತು ರಾಜಸ್ಥಾನದ ಮೂಲಕ ಬರುತ್ತಿವೆ ಎಂದೂ ದೀಕ್ಷಿತ ಆರೋಪಿಸಿದ್ದಾರೆ.
ನಗರದ ಗಡಿಗಳಲ್ಲಿ,ವಿಶೇಷವಾಗಿ ಪಂಜಾಬಿನಿಂದ ಬರುವ ವಾಹನಗಳ ತಪಾಸಣೆಗಾಗಿ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಜಿ ಕಚೇರಿಯು ದಿಲ್ಲಿ ಪೋಲಿಸ್ ಆಯುಕ್ತರಿಗೆ ಆದೇಶಿಸಿದೆ. ಪಂಜಾಬ್,ಹರ್ಯಾಣ ಮತ್ತು ರಾಜಸ್ಥಾನಗಳ ಡಿಜಿಪಿಗಳಿಗೂ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.