ಸೆಬಿ ಅಧ್ಯಕ್ಷೆಗೆ ತನಿಖೆ ಎದುರಿಸುತ್ತಿರುವ ಕಂಪೆನಿಯಿಂದ 2.16 ಕೋಟಿ ರೂ. ಬಾಡಿಗೆ ಆದಾಯ : ಮತ್ತೊಂದು ಹಿತಾಸಕ್ತಿ ಸಂಘರ್ಷವನ್ನು ಬಹಿರಂಗಪಡಿಸಿದ ಕಾಂಗ್ರೆಸ್
ಮಾಧವಿ ಪುರಿ ಬುಚ್ | Photo : PTI
ಹೊಸದಿಲ್ಲಿ : ಭಾರತೀಯ ಶೇರು ವಿನಿಮಯ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್, ವೊಕಾರ್ಡ್ ಲಿಮಿಟೆಡ್ನೊಂದಿಗೆ ನಂಟು ಹೊಂದಿರುವ ಕಂಪೆನಿಯೊಂದರಿಂದ ಬಾಡಿಗೆ ಆದಾಯವನ್ನು ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.
ಆಂತರಿಕ ವ್ಯವಹಾರ (ಇನ್ಸೈಡರ್ ಟ್ರೇಡಿಂಗ್) ಮತ್ತು ಇತರ ಉಲ್ಲಂಘನೆಗಳಿಗಾಗಿ ವೊಕಾರ್ಡ್ ಲಿಮಿಟೆಡ್ ವಿರುದ್ಧ ಸೆಬಿ ತನಿಖೆ ನಡೆಸುತ್ತಿದೆ. ಆದರೆ, ಆ ಕಂಪೆನಿಯೊಂದಿಗೆ ನಂಟು ಹೊಂದಿರುವ ಕ್ಯಾರಲ್ ಇನ್ಫೊ ಸರ್ವಿಸಸ್ ಎಂಬ ಕಂಪೆನಿಯಿಂದ ಸೆಬಿ ಅಧ್ಯಕ್ಷೆ ಬಾಡಿಗೆ ಆದಾಯ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಇದು, ಸೆಬಿ ಸದಸ್ಯರಿಗೆ ಅನ್ವಯಿಸುವ 2008ರ ಹಿತಾಸಕ್ತಿ ಸಂಘರ್ಷ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
2018 ಮತ್ತು 2024ರ ನಡುವಿನ ಅವಧಿಯಲ್ಲಿ, ಬುಚ್ ಮೊದಲು ಸೆಬಿಯ ಪೂರ್ಣಕಾಲಿಕ ಸದಸ್ಯೆಯಾಗಿ ಮತ್ತು ಬಳಿಕ ಅದರ ಅಧ್ಯಕ್ಷೆಯಾಗಿ ಬುಚ್ ಕ್ಯಾರಲ್ ಇನ್ಫೊ ಸರ್ವಿಸಸ್ನಿಂದ 2.16 ಕೋಟಿ ರೂ. ಸ್ವೀಕರಿಸಿದ್ದಾರೆ ಎಂದು ಕಾಂಗ್ರೆಸ್ ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಆರೋಪಿಸಿದರು.
ವೊಕಾರ್ಡ್ ವಿರುದ್ಧ ಸೆಬಿ ತನಿಖೆ ನಡೆಸುತ್ತಿರುವಂತೆಯೇ, ಅದರ ಸಹೋದರ ಕಂಪೆನಿಯೊಂದಿಗೆ ಬುಚ್ ಹಣಕಾಸು ಬಾಂಧವ್ಯ ಇಟ್ಟುಕೊಂಡಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ.
‘‘2022 ಮಾರ್ಚ್ 2ರಂದು, ಪ್ರಧಾನಿ ನೇತೃತ್ವದ ಸಂಪುಟ ನೇಮಕಾತಿಗಳ ಸಮಿತಿಯು ಸೆಬಿ ಅಧ್ಯಕ್ಷೆಯನ್ನು ನೇಮಿಸಿದೆ. ಪ್ರಧಾನಿ ಮತ್ತು ಅವರ ಆತ್ಮೀಯರ ಇಚ್ಛೆಗೆ ಅನುಗುಣವಾಗಿ ಕೆಲಸ ಮಾಡಿದರೆ ನಿಮ್ಮ ಹಿಂದಿನ ಹಣಕಾಸು ಬಾಂಧವ್ಯಗಳನ್ನು ಮುಂದುವರಿಸಿಕೊಂಡು ಹೋಗಬಹುದು ಎಂಬ ಶರತ್ತಿನ ಆದಾರದಲ್ಲಿ ಅವರನ್ನು ನೇಮಕ ಮಾಡಲಾಗಿದೆಯೇ?’’ ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದರು.