ಕಾಂಗ್ರೆಸ್ ಸೊನ್ನೆ ಸ್ಥಾನ ಪಡೆಯಲು ಮಾತ್ರ ಅರ್ಹವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ
ನರೇಂದ್ರ ಮೋದಿ | Photo: PTI
ಜೈಪುರ: “ರಾಜಸ್ಥಾನದ ಜನರು ಕಾಂಗ್ರೆಸ್ ಆಡಳಿತದ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ. ಅವರು ಸರ್ಕಾರ ನಡೆಸಿರುವ ರೀತಿಗೆ ಸೊನ್ನೆ ಸ್ಥಾನ ಪಡೆಯಲು ಮಾತ್ರ ಅರ್ಹರಾಗಿದ್ದಾರೆ. ರಾಜಸ್ಥಾನದ ಜನರು ಗೆಹ್ಲೋಟ್ ಸರ್ಕಾರವನ್ನು ಕಿತ್ತೊಗೆದು, ಬಿಜೆಪಿ ಸರ್ಕಾರವನ್ನು ತರಲು ನಿರ್ಧರಿಸಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ ಎಂದು Hindustantimes.com ವರದಿ ಮಾಡಿದೆ.
ಉದ್ಯಮಗಳು ಹಾಗೂ ಕಾರ್ಖಾನೆಗಳನ್ನು ಸ್ಥಾಪಿಸಬೇಕಾದ ಮಹತ್ವದ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದರಾದರೂ, ರಾಜಸ್ಥಾನ ಸರ್ಕಾರದ ಕೆಂಪು ಡೈರಿ ಹಾಗೂ ತಲೆ ಕಡಿದ ಘಟನೆಯನ್ನು ಉಲ್ಲೇಖಿಸಿ, “ಭ್ರಷ್ಟಾಚಾರ ವ್ಯಾಪಕವಾಗಿರುವ ಹಾಗೂ ಸಾರ್ವಜನಿಕವಾಗಿ ತಲೆ ಕಡಿಯುವಂಥ ಸನ್ನಿವೇಶ ಇರುವ ರಾಜ್ಯದಲ್ಲಿ ಯಾರು ತಾನೆ ಹೂಡಿಕೆ ಮಾಡಲು ಬಯಸುತ್ತಾರೆ” ಎಂದು ಹರಿಹಾಯ್ದರು.
ರಾಜಸ್ಥಾನದ ಸನಾತನ ಪರಂಪರೆಯನ್ನು ಪ್ರಶಂಸಿಸಿದ ಪ್ರಧಾನಿ ಮೋದಿ, ಸನಾತನ ಪರಂಪರೆಯನ್ನು ನಾಶಗೊಳಿಸಲು ಪ್ರಯತ್ನಿಸುತ್ತಿರುವ ಸೊಕ್ಕಿನ ಮೈತ್ರಿಕೂಟವು ಅದಕ್ಕೆ ಬೆಲೆ ತೆರಲಿದೆ ಎಂದು ಎಚ್ಚರಿಸಿದರು. “ರಾಜಸ್ಥಾನವು ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲಿದೆ ಮತ್ತು ಇಂಡಿಯಾ ಮೈತ್ರಿಕೂಟವು ಈ ಚುನಾವಣೆಯಲ್ಲಿ ಮಾತ್ರವಲ್ಲದೆ ಎಲ್ಲ ಚುನಾವಣೆಗಳಲ್ಲೂ ಪಾಠ ಕಲಿಯಲಿದೆ. ಅದು ಬುಡಮೇಲಾಗಲಿದೆ” ಎಂದು ಕಿಡಿ ಕಾರಿದರು.
“ಕಾಂಗ್ರೆಸ್ ಪಕ್ಷವು 30 ವರ್ಷಗಳ ಹಿಂದೆಯೇ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಬಹುತ್ತು. ಆದರೆ, ಅವರಿಗೆ ಮಹಿಳೆಯರಿಗೆ ಮೀಸಲಾತಿ ದೊರೆಯುವುದು ಬೇಕಿರಲಿಲ್ಲ. ಕಾಂಗ್ರೆಸ್ ಹಾಗೂ ಸೊಕ್ಕಿನ ಮೈತ್ರಿಕೂಟದ ಭಾಗಿದಾರರು ಮಹಿಳಾ ಮೀಸಲಾತಿಯ ವಿರುದ್ಧವಿದ್ದಾರೆ” ಎಂದೂ ಅವರು ಆರೋಪಿಸಿದರು.
ಹಲವಾರು ವರ್ಷಗಳಿಂದ ಮಹಿಳೆಯರು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಶೇ. 33ರಷ್ಟು ಮೀಸಲಾತಿಗಾಗಿ ಕಾಯುತ್ತಿದ್ದರು. ಇದನ್ನು ನಾನು ಮಾಡಿಲ್ಲ; ಬದಲಿಗೆ ನಿಮ್ಮ ಮತದ ಶಕ್ತಿ ಇದನ್ನು ಸಾಧಿಸಿದೆ” ಎಂದು ಅವರು ಹೇಳಿದ್ದಾರೆ.