ಕಾಂಗ್ರೆಸ್ ಪಕ್ಷದ್ದು ಸುಳ್ಳು ಭರವಸೆಗಳು: ಪ್ರಧಾನಿ ಮೋದಿ ವಾಗ್ದಾಳಿ
"ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು ಈಡೇರಿಲ್ಲ"
ನರೇಂದ್ರ ಮೋದಿ | PC : PTI
ಹೊಸದಿಲ್ಲಿ: ಅವಾಸ್ತವಿಕ ಭರವಸೆಗಳನ್ನು ನೀಡುವುದು ಸುಲಭ. ಆದರೆ ಅವುಗಳನ್ನು ಸರಿಯಾಗಿ ಜಾರಿಗೊಳಿಸುವುದು ಕಠಿಣ ಅಥವಾ ಅಸಾಧ್ಯ ಎಂಬ ಕಠಿಣ ಮಾರ್ಗವನ್ನು ಕಾಂಗ್ರೆಸ್ ಪಕ್ಷ ಅರಿತುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷದ್ದು ಸುಳ್ಳು ಭರವಸೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಚುನಾವಣಾ ಪ್ರಚಾರದ ಸಮಯದಲ್ಲಿ ಅವರು ಜನರಿಗೆ ಗ್ಯಾರಂಟಿಗಳ ಭರವಸೆ ನೀಡುತ್ತಾರೆ. ಆದರೆ ಅದನ್ನು ಪೂರೈಸಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ಅವರಿಗೆ ತಿಳಿದಿದೆ. ಈಗ, ಅದು ಬಹಿರಂಗವಾಗಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ಯಾವುದೇ ರಾಜ್ಯವನ್ನು ಪರಿಶೀಲಿಸಿದರೆ ಗ್ಯಾರಂಟಿಗಳಿಂದ ಅಭಿವೃದ್ಧಿಯ ಪಥ ಮತ್ತು ಹಣಕಾಸಿನ ಪರಿಸ್ಥಿತಿ ಹದಗೆಡುತ್ತಿದೆ. ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣಗಳಲ್ಲಿ ಅವರ ಗ್ಯಾರಂಟಿಗಳು ಈಡೇರಿಲ್ಲ. ಈ ರಾಜ್ಯಗಳ ಜನರಿಗೆ ವಂಚಿಸಲಾಗಿದೆ. ಬಡವರು, ಯುವಕರು, ರೈತರು ಮತ್ತು ಮಹಿಳೆಯರು ಇಂತಹ ರಾಜಕೀಯದ ಬಲಿಪಶುಗಳಾಗಿದ್ದರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಒಳ ರಾಜಕೀಯದಲ್ಲಿ ನಿರತವಾಗಿದೆ. ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುವ ಬದಲು ಲೂಟಿ ಮಾಡುತ್ತಿದೆ. ಅಷ್ಟೇ ಅಲ್ಲ, ಈಗಿರುವ ಯೋಜನೆಗಳನ್ನು ಹಿಂಪಡೆಯಲು ಹೊರಟಿದ್ದಾರೆ ಎಂದು ಪ್ರಧಾನಿ ನೇರ ಆರೋಪ ಮಾಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಸರ್ಕಾರಿ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ಸಿಗುತ್ತಿಲ್ಲ. ತೆಲಂಗಾಣದಲ್ಲಿ ರೈತರು ಭರವಸೆ ನೀಡಿದ ಸಾಲ ಮನ್ನಾಕ್ಕಾಗಿ ಕಾಯುತ್ತಿದ್ದಾರೆ.
ಈ ಹಿಂದೆ, ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಅವರು ಕೆಲವು ಗ್ಯಾರಂಟಿಗಳ ಭರವಸೆ ನೀಡಿದ್ದರು. ಅದನ್ನು ಐದು ವರ್ಷಗಳವರೆಗೆ ಜಾರಿ ಮಾಡಲಾಗಿಲ್ಲ. ಕಾಂಗ್ರೆಸ್ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇಂತಹ ಹಲವಾರು ಉದಾಹರಣೆಗಳಿವೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಪ್ರಾಯೋಜಿತ ಸುಳ್ಳು ಗ್ಯಾರಂಟಿ ಸಂಸ್ಕೃತಿಯ ವಿರುದ್ಧ ದೇಶದ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ! ಹರಿಯಾಣದ ಜನರು ಅವರ ಗ್ಯಾರಂಟಿ ತಿರಸ್ಕರಿಸಿದರು. ಆ ಮೂಲ ಸ್ಥಿರ, ಪ್ರಗತಿ ಆಧಾರಿತ ಸರ್ಕಾರಕ್ಕೆ ಹೇಗೆ ಆದ್ಯತೆ ನೀಡಿದರು ಎಂದು ಪ್ರಧಾನಿ ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ಗೆ ನೀಡುವ ಮತವು ಆಡಳಿತವಿಲ್ಲದ, ಕಳಪೆ ಆರ್ಥಿಕತೆ ಮತ್ತು ಲೂಟಿಗೆ ನೀಡುವ ಮತ ಎಂಬ ಅರಿವು ಭಾರತದಾದ್ಯಂತ ಬೆಳೆಯುತ್ತಿದೆ. ಭಾರತದ ಜನರು ಅಭಿವೃದ್ಧಿ ಮತ್ತು ಪ್ರಗತಿಯನ್ನು ಬಯಸುತ್ತಾರೆ, ಅದೇ ಹಳೆಯ ಕಾಂಗ್ರೆಸ್ ನ ಸುಳ್ಳು ಭರವಸೆಗಳನ್ನು ಅಲ್ಲ ಎಂದು ಪ್ರಧಾನಿ ವ್ಯಂಗ್ಯವಾಡಿದ್ದಾರೆ.