ಜಮ್ಮು -ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ, ವಿಧಾನ ಸಭೆ ಚುನಾವಣೆ ಆಗ್ರಹಿಸಿ ಕಾಂಗ್ರೆಸ್ ನಿರ್ಣಯ ಅಂಗೀಕಾರ
Photo: PTI
ಹೊಸದಿಲ್ಲಿ: ಜಮ್ಮು ಹಾಗೂ ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ (ಜೆಕೆಪಿಸಿಸಿ) ಶನಿವಾರ ತನ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಮ್ಮು ಹಾಗೂ ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಹಾಗೂ ವಿಧಾನ ಸಭೆ ಚುನಾವಣೆ ಆಗ್ರಹಿಸಿ ಎರಡು ನಿರ್ಣಯಗಳನ್ನು ಅಂಗೀಕರಿಸಿವೆ.
ಎಲ್ಲಾ ಸರಕಾರಿ ಹಾಗೂ ಅರೆ ಸರಕಾರಿ ಸಂಸ್ಥೆಗಳಲ್ಲಿ ತ್ವರಿತ ಗತಿಯಲ್ಲಿ ಎಲ್ಲಾ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಜೆಕೆಪಿಸಿಸಿ ಆಗ್ರಹಿಸಿದೆ. ಅಲ್ಲದೆ, ನೇಮಕಾತಿ ಹಗರಣದ ತನಿಖೆ ನಡೆಸಲು ಉನ್ನತ ಮಟ್ಟದ ಸ್ವತಂತ್ರ್ಯ ಆಯೋಗವನ್ನು ರೂಪಿಸುವಂತೆ ಕೂಡ ಕರೆ ನೀಡಿದೆ.
ಜಮ್ಮು ಹಾಗೂ ಕಾಶ್ಮೀರದ ಎಐಸಿಸಿ ಉಸ್ತುವಾರಿ ರಜನಿ ಪಾಟೀಲ್ ಅವರ ಸೂಚನೆ ಮೇರೆಗೆ ಈ ನಿರ್ಣಯ ಅಂಗೀಕರಿಸಲಾಗಿದೆ.
‘‘ನಾವು ಇಂದು ರಾಜಕೀಯ ವ್ಯವಹಾರಗಳ ಸಮಿತಿಯ ಸಭೆ ನಡೆಸಿದ್ದೇವೆ. ಈ ಸಭೆಯಲ್ಲಿ ಎರಡು ನಿರ್ಣಯಗಳನ್ನು ಅಂಗೀಕರಿಸಿದ್ದೇವೆ. ಒಂದು ರಾಜಕೀಯ ಹಾಗೂ ಇನ್ನೊಂದು ಸಾಮಾಜಿಕ-ಆರ್ಥಿಕ. ಈ ವಿಷಯದ ಕುರಿತು ಚರ್ಚೆ ನಡೆಸಲು ನಾವು ಸಭೆ ನಡೆಸಿದೆವು. ನಾವು ಜಮ್ಮು ಹಾಗೂ ಕಾಶ್ಮೀರದ ಪರಿಸ್ಥಿತಿ ಕುರಿತು ಚರ್ಚೆ ನಡೆಸುತ್ತಿದ್ದೇವೆ ಹಾಗೂ ಅದರ ಬಗ್ಗೆ ಕಾರ್ಯಕರ್ತರ ನಿಲುವನ್ನು ಆಲಿಸುತ್ತಿದ್ದೇವೆ’’ ಎಂದು ಪಾಟೀಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.