ಸಿಸಿಟಿವಿಯಲ್ಲಿ ಕಂಡುಬಂದ ವ್ಯಕ್ತಿಯನ್ನೇ ಬಂಧಿಸಲಾಗಿದೆಯೆ?: ಸೈಫ್ ಅಲಿ ಖಾನ್ ಪ್ರಕರಣದ ತನಿಖೆ ಕುರಿತು ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್

Photo credit: news18.com
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ದಾಳಿಯ ಕುರಿತು ನಡೆಯುತ್ತಿರುವ ತನಿಖೆಯ ಕುರಿತು ಶುಕ್ರವಾರ ಪ್ರಶ್ನೆಯೆತ್ತಿರುವ ಕಾಂಗ್ರೆಸ್, ಸಿಸಿಟಿವಿಯಲ್ಲಿ ಕಂಡು ಬಂದಿರುವ ವ್ಯಕ್ತಿಯನ್ನೇ ಬಂಧಿಸಲಾಗಿದೆಯೆ ಎಂದು ಅನುಮಾನ ವ್ಯಕ್ತಪಡಿಸಿದೆ.
ಒಂದು ವಾರದ ಹಿಂದೆ ಬಾಂದ್ರಾದಲ್ಲಿನ ತಮ್ಮ ನಿವಾಸದಲ್ಲಿ ಚಾಕುವಿನ ದಾಳಿಗೊಳಗಾಗಿದ್ದ ನಟ ಸೈಫ್ ಅಲಿ ಪ್ರಕರಣದ ಸಂಬಂಧ ಬಾಂಗ್ಲಾದೇಶದ ಶರೀಫುಲ್ ಇಸ್ಲಾಂ ಶೆಹಝಾದ್ ಮುಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದರು.
ಈ ಕುರಿತು ಬಾಂಗ್ಲಾ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ್ದ ಶರೀಫುಲ್ ತಂದೆ ಮುಹಮ್ಮದ್ ರುಹೂಲ್ ಅಮೀನ್ ಫಕೀರ್, ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವಿಸಿದ್ದರಿಂದ, ಯಾವುದೇ ಮಾನ್ಯತೆ ಹೊಂದಿರುವ ದಾಖಲೆಗಳಿಲ್ಲದೆ ನನ್ನ ಪುತ್ರ ಬಾಂಗ್ಲಾದೇಶದ ಗಡಿಯನ್ನು ದಾಟಿ ಭಾರತಕ್ಕೆ ತೆರಳಿದ್ದ ಎಂದು ತಿಳಿಸಿದ್ದಾರೆ. ಆದರೆ, ಕೆಲವು ಸುದ್ದಿ ವಾಹಿನಿಗಳು ಪ್ರಸಾರ ಮಾಡಿರುವಂತೆ ತನ್ನ ಪುತ್ರ ಕುಸ್ತಿ ಪಟು ಎಂಬ ಸಂಗತಿಯನ್ನು ಅವರು ನಿರಾಕರಿಸಿದ್ದಾರೆ.
“ನಾನು ಇದನ್ನೆಲ್ಲ ಟಿವಿ ವಾಹಿನಿಗಳಲ್ಲೇ ನೋಡುತ್ತಿರುವುದು. ಶರೀಫುಲ್ ಅಲ್ಲಿ ಯಾರ ಮೇಲಾದರೂ ದಾಳಿ ನಡೆಸಲು ಯತ್ನಿಸಿದ್ದೂ ಕೂಡಾ ನನಗೆ ತಿಳಿದಿಲ್ಲ” ಎಂದು ಅವರು ಹೇಳಿದ್ದಾರೆ. ಆದರೆ, ಇದಕ್ಕೂ ಮುನ್ನ ಬಿಡುಗಡೆಯಾಗಿದ್ದ ಸಿಸಿಟಿವಿ ದೃಶ್ಯಾವಳಿಯು ನನ್ನ ಪುತ್ರನದ್ದಾಗಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಈ ಕುರಿತು ಪೊಲೀಸರಿಂದ ಸ್ಪಷ್ಟೀಕರಣ ಕೋರಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, “ಮಧ್ಯರಾತ್ರಿಯಲ್ಲಿ ನಟ ಸೈಫ್ ಅಲಿ ಖಾನ್ ಮೇಲೆ ಅವರ ನಿವಾಸದಲ್ಲೇ ದಾಳಿ ನಡೆದಿರುವುದರಿಂದ ಮುಂಬೈನ ಭದ್ರತಾ ವಿಚಾರ ಮುನ್ನೆಲೆಗೆ ಬಂದಿದೆ. ದಾಳಿಕೋರನನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಪ್ರಕಟಿಸಿದ್ದಾರೆ. ಆದರೆ, ಸಿಸಿಟಿವಿಯಲ್ಲಿ ಕಂಡು ಬಂದಿರುವ ವ್ಯಕ್ತಿ ಹಾಗೂ ಬಂಧಿತ ವ್ಯಕ್ತಿಯ ನಡುವೆ ಯಾವುದೇ ಹೋಲಿಕೆಯಿಲ್ಲ ಎಂದು ದಿನಪತ್ರಿಕೆಯೊಂದು ವರದಿ ಮಾಡಿದೆ” ಎಂದು ಅವರು ಆರೋಪಿಸಿದ್ದಾರೆ.
“ಸುರಕ್ಷಿತ ಎಂದೇ ಕರೆಯಲಾಗುವ ಮುಂಬೈನ ಬಾಂದ್ರಾದಲ್ಲಿನ ನಟ ಸೈಫ್ ಅಲಿ ಖಾನ್ ನಿವಾಸದಲ್ಲಿಯೇ ಅವರ ಮೇಲೆ ದಾಳಿ ನಡೆದಿರುವುದರಿಂದ ಸೆಲೆಬ್ರಿಟಿಗಳು ಸುರಕ್ಷಿತವಲ್ಲ ಎಂದು ಗೊತ್ತಾಗಿದೆ. ಅಲ್ಲದೆ ಗ್ರಾಮ ಸರಪಂಚ ಕೂಡಾ ಇಲ್ಲಿ ಸುರಕ್ಷಿತವಲ್ಲ. ಹಾಗಾದರೆ, ಸಾಮಾನ್ಯ ಜನರ ಸುರಕ್ಷತೆಯ ಪಾಡೇನು?” ಎಂದು ಅವರು ಸರಕಾರವನ್ನು ಖಾರವಾಗಿ ಪ್ರಶ್ನಿಸಿದ್ದಾರೆ.