ಕಾಂಗ್ರೆಸ್ ಪಕ್ಷದ ಪುನರ್ರಚನೆ | ಎಐಸಿಸಿಯಲ್ಲಿ ಅನುಭವಿ ನಾಯಕರಿಗೆ ಮಣೆ ಹಾಕಲು ರಾಹುಲ್ ಗಾಂಧಿ ಆಸಕ್ತಿ

File Photo: PTI
ಹೊಸದಿಲ್ಲಿ: ಎಐಸಿಸಿಯಲ್ಲಿ ಅನುಭವಿ ನಾಯಕರಿಗೆ ಮಣೆ ಹಾಕಲು ರಾಹುಲ್ ಗಾಂಧಿ ಆಸಕ್ತಿ ವಹಿಸಿರುವುದರಿಂದ ಕಾಂಗ್ರೆಸ್ ಪಕ್ಷದ ಪುನರ್ ರಚನೆ ಮಾಡಲಾಗಿದೆ.
ಕೆಲವು ನಾಯಕರಿಗೆ ನೀಡಲಾಗಿರುವ ತಮ್ಮ ಪ್ರಾಥಮಿಕ ಜವಾಬ್ದಾರಿಗಳನ್ನು ಉಳಿಸಿಕೊಂಡು ರಾಜ್ಯಗಳ ಹೆಚ್ಚುವರಿ ಜವಾಬ್ದಾರಿಗಳಿಂದ ಬಿಡುಗಡೆ ಮಾಡಲಾಗುತ್ತಿದೆ. ಪಕ್ಷದ ನಾಯಕತ್ವವು ಕೆಲವು ಉಸ್ತುವಾರಿಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿ, ಅವರನ್ನು ಜವಾಬ್ದಾರಿಗಳಿಂದ ಬಿಡುಗಡೆ ಮಾಡುವ ಕೆಲಸ ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಹರೀಶ್ ಚೌಧರಿ, ರಜನಿ ಪಾಟೀಲ್ ಮತ್ತು ಬಿಕೆ ಹರಿಪ್ರಸಾದ್ ಅವರಂತಹ ನಾಯಕರಿಗೆ ಮತ್ತೆ ಎಐಸಿಸಿಯಲ್ಲಿ ಪ್ರಮುಖ ಸ್ಥಾನ ವಹಿಸುವ ಸಾಧ್ಯತೆಯಿದೆ. ಅವರು ಈ ಹಿಂದಿನ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದು ಪಕ್ಷಕ್ಕೆ ಅವರ ಮೇಲಿನ ಭರವಸೆ ಹೆಚ್ಚಿದೆ ಎನ್ನಲಾಗಿದೆ.
ಈ ಪಟ್ಟಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ವಿಶೇಷ ಮುತುವರ್ಜಿ ವಹಿಸಿ ಸಮಿತಿಯನ್ನು ರೂಪಿಸಿದ್ದಾರೆ. ವಿಶೇಷವಾಗಿ ಅವರೊಂದಿಗೆ ಸಂಘಟನಾ ವಿಷಯಗಳಲ್ಲಿ ಕೆಲಸ ಮಾಡಿದ ಅವರ ಮೂವರು ಆಪ್ತ ಸಹಾಯಕರು ಇಬ್ಬರು ಪ್ರಧಾನ ಕಾರ್ಯದರ್ಶಿಗಳು ಮತ್ತು ಒಂಬತ್ತು ಉಸ್ತುವಾರಿಗಳು ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಪ್ರಮುಖ ಹುದ್ದೆಗಳನ್ನು ಪಡೆಯಲಿದ್ದಾರೆ.
ಬಹುಜನ ರಾಜಕೀಯವನ್ನು ಗಮನದಲ್ಲಿಟ್ಟುಕೊಂಡು ಕೆ. ರಾಜು ಅವರಿಗೆ ಜಾರ್ಖಂಡ್ನ ಜವಾಬ್ದಾರಿಯನ್ನು ನೀಡಲಾಗಿದೆ. ತಳ ಹಂತದ ನಾಯಕಿ, ಕಾರ್ಯಕರ್ತೆಯಿಂದ ರಾಜಕಾರಣಿಯಾಗಿ ಬದಲಾದ ಮೀನಾಕ್ಷಿ ನಟರಾಜನ್ ಅವರಿಗೆ ತೆಲಂಗಾಣದ ಜವಾಬ್ದಾರಿಯನ್ನು ನೀಡಲಾಗಿದೆ. ಅಲ್ಲಿ ಕಾಂಗ್ರೆಸ್ ಸರ್ಕಾರವು ಸಾಮಾಜಿಕ ಬದಲಾವಣೆಯಲ್ಲಿ ದೊಡ್ಡ ಮಟ್ಟದ ಟಿಕೆಟ್ ಬದಲಾವಣೆಗಳನ್ನು ಮಾಡಲು ಯೋಜನೆ ಹಾಕಿಕೊಂಡಿದೆ.
ಈಗಾಗಲೇ, ತೆಲಂಗಾಣ ಸರ್ಕಾರ ಜಾತಿ ಜನಗಣತಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ದಲಿತರ ಉಪ-ವರ್ಗೀಕರಣ ಮಾಡಲು ಪಕ್ಷವು ಯೋಚಿಸುತ್ತಿದೆ. ಇವೆರಡೂ ಸಂಕಷ್ಟ ತರಬಹುದು ಎನ್ನುವ ನಿಟ್ಟಿನಲ್ಲಿ, ರಾಹುಲ್ ಆಪ್ತ ಮೋಹನ ಪ್ರಕಾಶ್ ಅವರ ಸ್ಥಾನದಲ್ಲಿ ಕೃಷ್ಣ ಅಲ್ಲಾವರು ಅವರನ್ನು ನೇಮಿಸಲಾಗಿದೆ. ಇದು ನಾಯಕತ್ವವು ಸಂಭಾವ್ಯ ಫಲಿತಾಂಶಕ್ಕೆ ನಡೆಸಿರುವ ಸಿದ್ಧತೆಯನ್ನು ಎತ್ತಿ ತೋರಿಸುತ್ತಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆಪ್ತರು ಮತ್ತು ಚುನಾವಣಾ ನಿರ್ವಹಣಾ ಕೌಶಲ್ಯಕ್ಕೆ ಹೆಸರುವಾಸಿಯಾದ ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಪಂಜಾಬ್ ಉಸ್ತುವಾರಿಯಾಗಿ ಆಯ್ಕೆ ಮಾಡಲಾಗಿದೆ. ಸ್ವಲ್ಪ ಬಿಡುವಿನ ನಂತರ ಕರ್ನಾಟಕದ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಅವರನ್ನು ಹರಿಯಾಣದ ಉಸ್ತುವಾರಿಯಾಗಿ ನೇಮಿಸಿರುವುದು ಆ ರಾಜ್ಯಗಳನ್ನು ನಿರ್ವಹಿಸುವಲ್ಲಿ ಪಕ್ಷದ ಗಂಭೀರತೆಯನ್ನು ತೋರಿಸಿದೆ ಎಂದು ವರದಿಯಾಗಿದೆ.
ಈ ಪಟ್ಟಿಯು ಭವಿಷ್ಯಕ್ಕಾಗಿ ನಾಯಕರನ್ನು ರೂಪಿಸುವ ನಾಯಕತ್ವದ ಉದ್ದೇಶವನ್ನು ತೋರಿಸುತ್ತದೆ. ಸಯ್ಯದ್ ನಸೀರ್ ಹುಸೇನ್, ಅಲ್ಲಾವರು ಮತ್ತು ಸಪ್ತಗಿರಿ ಉಲಕಾ ಅವರಂತಹಾ ಯುವ ನಾಯಕರು ಹರೀಶ್ ಚೌಧರಿ, ಅಜಯ್ ಕುಮಾರ್ ಲಲ್ಲು, ಗಿರೀಶ್ ಚೋಡಂಕರ್ ಮತ್ತು ರಜನಿ ಪಾಟೀಲ್ ಅವರಂತಹ ಹಿರಿಯರೊಂದಿಗೆ ಪಟ್ಟಿಯಲ್ಲಿ ಸ್ಥಾನ ಹಂಚಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ವಿಶೇಷವಾಗಿ ಸಯ್ಯದ್ ನಸೀರ್ ಹುಸೇನ್ ಅವರ ಪದೋನ್ನತಿ ಗಮನ ಸೆಳೆದಿದೆ. ಕಳೆದ ಕೆಲವೇ ವರ್ಷಗಳಲ್ಲಿ ಪಕ್ಷದ ವಕ್ತಾರರಾಗಿದ್ದ ಅವರು ರಾಜ್ಯಸಭಾ ಸದಸ್ಯ, ಸಚೇತಕರಾದರು.