ಕಾಂಗ್ರೆಸ್ ದೇಣಿಗೆ ವೆಬ್ಸೈಟ್ ಆರಂಭಗೊಂಡ 48 ಗಂಟೆಗಳಲ್ಲಿ 20,000ಕ್ಕೂ ಅಧಿಕ ಸೈಬರ್ ದಾಳಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ತಾನು ನೂತನವಾಗಿ ಆರಂಭಿಸಿದ ದೇಣಿಗೆ ವೆಬ್ಸೈಟ್ ತನ್ನ ಮೊದಲ ಎರಡು ದಿನಗಳ ಕಾರ್ಯಾಚರಣೆಯ ವೇಳೆ ಬರೋಬ್ಬರಿ 20,400 ಸೈಬರ್ ದಾಳಿಗಳನ್ನೆದುರಿಸಿದೆ ಎಂದು ಕಾಂಗ್ರೆಸ್ ಹೇಳಿದೆ. ಈ ದಾಳಿಗಳ ಪೈಕಿ 1,340 ದಾಳಿಗಳು ಡೇಟಾ ಕಳವುಗೈಯ್ಯುವ ಯತ್ನ ನಡೆಸಿದ್ದವು ಎಂದು ಪಕ್ಷ ಹೇಳಿದೆ.
ಈ ದಾಳಿಗಳು ನಿರೀಕ್ಷಿತವಾಗಿದ್ದರಿಂದ ಈ ಸಮಸ್ಯೆ ನಿಭಾಯಿಸಲು ಭದ್ರ ಫೈರ್ವಾಲ್ಗಳನ್ನು ಬಳಸಲಾಗಿತ್ತು ಎಂದು ಪಕ್ಷ ಹೇಳಿದೆ.
ಈ ಸವಾಲುಗಳ ಹೊರತಾಗಿಯೂ ಸುಮಾರು 1.13 ಲಕ್ಷ ಜನರಿಂದ ರೂ. 2.81 ಕೋಟಿ ದೇಣಿಗೆ ಸಂಗ್ರಹಿಸಲು ಪಕ್ಷ ಸಫಲವಾಗಿದೆ ಎಂದು ವರದಿಯಾಗಿದೆ.
ಪಕ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ದೇಣಿಗೆ ನೀಡಿದ 32 ಮಂದಿಯ ಪೈಕಿ ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಅಶೋಕ್ ಗೆಹ್ಲೋಟ್, ಪವನ್ ಖೇರಾ, ಜೈರಾಂ ರಮೇಶ್ ಸೇರಿದ್ದಾರೆ. ರೂ 13,800 ಮೊತ್ತವನ್ನು 600ಕ್ಕೂ ಹೆಚ್ಚು ಮಂದಿ ದೇಣಿಗೆ ನೀಡಿದ್ದಾರೆ.
ಗರಿಷ್ಠ ದೇಣಿಗೆಗಳು (ರೂ. 56 ಲಕ್ಷ) ಮಹಾರಾಷ್ಟ್ರದಿಂದ ಬಂದಿದ್ದರೆ, ರಾಜಸ್ಥಾನ (ರೂ. 26 ಲಕ್ಷ), ದಿಲ್ಲಿ (ರೂ. 20 ಲಕ್ಷ), ಉತ್ತರ ಪ್ರದೇಶ (ರೂ. 19 ಲಕ್ಷ) ಮತ್ತು ಕರ್ನಾಟಕದಿಂದ ( ರೂ. 18 ಲಕ್ಷ) ದೇಣಿಗೆ ಬಂದಿವೆ.
ಬಿಹಾರದಿಂದ ಸಾಕಷ್ಟು ಜನರು ಸಣ್ಣ ಮೊತ್ತಗಳ ದೇಣಿಗೆ ನೀಡಿದ್ದಾರೆ.
ಆರಂಭಿಕ 48 ಗಂಟೆಗಳಲ್ಲಿ 1.2 ಕೋಟಿ ಜನರು ಈ www.donateinc.in ವೆಬ್ಸೈಟ್ಗೆ ಭೇಟಿ ನೀಡಿದ್ದಾರೆ.