ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಬಹಿಷ್ಕರಿಸಬೇಕೇ ಹೊರತು ಪತ್ರಕರ್ತರನ್ನಲ್ಲ: ಬಿಜೆಪಿ
ರಾಹುಲ್ ಗಾಂಧಿ | Photo: PTI
ಹೊಸದಿಲ್ಲಿ: 14 ಮಾಧ್ಯಮ ಸಂಸ್ಥೆಗಳ ನಿರೂಪಕರನ್ನು ಬಹಿಷ್ಕರಿಸಲು INDIA ಮೈತ್ರಿಕೂಟ ತೆಗೆದುಕೊಂಡಿರುವ ನಿರ್ಧಾರವನ್ನು ಖಂಡಿಸಿ, ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ, ಮಾಧ್ಯಮ ಅಥವಾ ಇನ್ನಾವುದೇ ಸಂಸ್ಥೆಯನ್ನು ಹೊರಗಿಡುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಲಾಭವಾಗುವುದಿಲ್ಲ. ಬದಲಿಗೆ ಯಾವುದೇ ಸಾಮರ್ಥ್ಯವಿಲ್ಲದ ರಾಹುಲ್ ಗಾಂಧಿಯನ್ನು ಬಹಿಷ್ಕರಿಸುವುದರಿಂದ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದೆ ಎಂದು ಹೇಳಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಈ ವಿರೋಧ ಪಕ್ಷಗಳ ಮೈತ್ರಿಕೂಟವು ಚುನಾವಣಾ ಆಯೋಗವಿರಲಿ ಅಥವಾ ನ್ಯಾಯಾಲಯಗಳಿರಲಿ ದಾಳಿ ಮಾಡದ ಯಾವುದೇ ಸಂಸ್ಥೆಗಳು ಉಳಿದಿಲ್ಲ ಎಂದು ಟೀಕಿಸಿದ್ದಾರೆ.
ಎಲ್ಲರೂ ತಮ್ಮ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ ಎಂದು ಮಾಧ್ಯಮ ಸಂಸ್ಥೆಗಳ ನಿರೂಪಕರನ್ನು ಸಂಬಿತ್ ಪಾತ್ರ ಸಮರ್ಥಿಸಿಕೊಂಡಿದ್ದಾರೆ.
“ಯಾರಾದರೂ ಅಸಮರ್ಥರಿದ್ದರೆ ಹಾಗೂ ತನ್ನ ಲಾಭಕ್ಕಾಗಿ ಯಾರನ್ನಾದರೂ ಕಾಂಗ್ರೆಸ್ ಪಕ್ಷವು ಬಹಿಷ್ಕರಿಸಬೇಕಿದ್ದರೆ ಅದು ರಾಹುಲ್ ಗಾಂಧಿ ಮಾತ್ರ. ನಿಮ್ಮ ನಾಯಕನಲ್ಲಿ ಯಾವುದೇ ಸಾಮರ್ಥ್ಯವಿಲ್ಲ. ನೀವು ಯಾರನ್ನೆಲ್ಲ ಬಹಿಷ್ಕರಿಸುತ್ತೀರಿ? ಒಂದು ವೇಳೆ ನೀವು ಬಹಿಷ್ಕಾರ ಹೇರಿ ಮುನ್ನಡೆಯುವುದಿದ್ದರೆ, ನಿಮ್ಮ ನಾಯಕನನ್ನು ಬಹಿಷ್ಕರಿಸಿ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕ (ರಾಹುಲ್ ಗಾಂಧಿ) ಪ್ರೀತಿಯ ಬಗ್ಗೆ ಮಾತನಾಡುತ್ತಾರಾದರೂ ದ್ವೇಷವನ್ನು ಹರಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
“ನಾಯಕರು ದೇವರ ಬಗ್ಗೆ ಪ್ರಶ್ನೆಗಳನ್ನೆತ್ತಬಹುದು; ಆದರೆ, ಈ ನಾಯಕರ ಕುರಿತು ಪತ್ರಕರ್ತರು ಪ್ರಶ್ನೆಗಳನ್ನೆತ್ತುವಂತಿಲ್ಲ” ಎಂದೂ ಸಂಬಿತ್ ಪಾತ್ರ ವ್ಯಂಗ್ಯವಾಡಿದ್ದಾರೆ.