ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: 22 ಬಂಡಾಯ ಅಭ್ಯರ್ಥಿಗಳನ್ನು ಅಮಾನತುಗೊಳಿಸಿದ ಕಾಂಗ್ರೆಸ್
ಸಾಂದರ್ಭಿಕ ಚಿತ್ರ (PTI)
ಮಹಾರಾಷ್ಟ್ರ: ವಿಧಾನಸಭೆ ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧೆಗಿಳಿದ 22 ಬಂಡಾಯ ಅಭ್ಯರ್ಥಿಗಳನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಸೋಮವಾರ ಹೇಳಿಕೊಂಡಿದೆ.
ಅಮಾನತುಗೊಂಡ 22 ಅಭ್ಯರ್ಥಿಗಳು ಮಹಾ ವಿಕಾಸ್ ಅಘಾಡಿಯ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದರು. ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ರಮೇಶ್ ಚೆನ್ನಿತ್ತಲ ಅವರ ಸೂಚನೆಯಂತೆ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಶಿಸ್ತು ಕ್ರಮ ಎದುರಿಸಿದ ಪ್ರಮುಖ ನಾಯಕರಲ್ಲಿ ರಾಮ್ಟೆಕ್ನಿಂದ ಸ್ಪರ್ಧಿಸಿರುವ ಮಾಜಿ ಸಚಿವ ರಾಜೇಂದ್ರ ಮುಲಾಕ್, ಕತೋಲ್ನಿಂದ ಸ್ಪರ್ಧಿಸುತ್ತಿರುವ ಯಜ್ಞವಾಲ್ಕ್ ಜಿಚ್ಕರ್, ಕಸ್ಬಾದಿಂದ ಸ್ಪರ್ಧಿಸುತ್ತಿರುವ ಕಮಲ್ ವ್ಯಾವಾರೆ ಸೇರಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಮತದಾನ ನಡೆಯಲಿದೆ. ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷ ಇದೆ. ಮಹಾ ವಿಕಾಸ್ ಅಘಾಡಿ ಮೈತ್ರಿಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಶರದ್ ಪವಾರ್ ನೇತೃತ್ವದ ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷ ಇದೆ. ನವೆಂಬರ್ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.