ಜೈಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಕಾರಣಕ್ಕೆ ಟೀಕೆಗೆ ಗುರಿಯಾದ ಕಾಂಗ್ರೆಸ್; ಶಶಿ ತರೂರ್ ರಿಂದಲೂ ವಾಗ್ದಾಳಿ
ಶಶಿ ತರೂರ್ | Photo: PTI
ಜೈಪುರ: ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರನ್ನು ಟೀಕೆ, ದ್ವೇಷ ಹರಡುವ ʼಜೈಪುರ್ ಡೈಲಾಗ್ಸ್ʼನೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಗೆ ಜೈಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ ಎಂಬ ಕುರಿತು ಸಾಮಾಜಿಕ ಮಾಧ್ಯಮ ಬಳಕೆದಾರರು ಗಮನಕ್ಕೆ ತರುತ್ತಿದ್ದಂತೆಯೆ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಕೂಡಾ ರವಿವಾರ ಜೈಪುರ ಅಭ್ಯರ್ಥಿ ಸುನೀಲ್ ಶರ್ಮ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಕಾಂಗ್ರೆಸ್ ಬಿಡುಗಡೆ ಮಾಡಿದ ಮೂರನೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸುನೀಲ್ ಶರ್ಮ ಹೆಸರು ಕಾಣಿಸಿಕೊಳ್ಳುತ್ತಿದ್ದಂತೆಯೆ ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್ ವಿರುದ್ಧ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಬಲಪಂಥೀಯ ಗುಂಪಾದ ಜೈಪುರ್ ಡೈಲಾಗ್ಸ್ ವೇದಿಕೆಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಯೊಬ್ಬನನ್ನು ಕಣಕ್ಕಿಳಿಸುವ ಕಾಂಗ್ರೆಸ್ ನಿರ್ಧಾರದ ಕುರಿತು ಸಾಮಾಜಿಕ ಮಾಧ್ಯೆಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಯಿತು.
ಜೈಪುರ್ ಡೈಲಾಗ್ಸ್ ನ ಅಧಿಕೃತ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಲಾಗಿರುವ ಬಹುತೇಕ ವಿಡಿಯೊಗಳಲ್ಲಿ ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಳ್ಳಲಾಗಿತ್ತು.
ಈ ಖಾತೆಯು ತಮ್ಮ ಮೇಲೆ ನಡೆಸಿರುವ ಹಲವಾರು ದಾಳಿಗಳನ್ನು ಉಲ್ಲೇಖಿಸಿರುವ ತಿರುವನಂತಪುರಂ ಸಂಸದ ಶಶಿ ತರೂರ್, “24 ಅಕ್ಬರ್ ರಸ್ತೆಯಲ್ಲಿ ಈ ವ್ಯಕ್ತಿಗೆ ಒಂದು ಬಗೆಯ ಸಾಕ್ಷಾತ್ಕಾರವಾಗಿರಬಹುದು!” ಎಂದು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ವ್ಯಂಗ್ಯವಾಡಿದ್ದಾರೆ.
ತಮ್ಮ ಮೇಲಿನ ಆರೋಪಗಳ ಕುರಿತು ಸುನೀಲ್ ಶರ್ಮ ಇನ್ನಷ್ಟೆ ಪ್ರತಿಕ್ರಿಯಿಸಬೇಕಿದೆ.