SC/ST ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ಮೀಸಲಾತಿ ನೀಡಲು ಬಯಸಿದ್ದ ಕಾಂಗ್ರೆಸ್: ಪ್ರಧಾನಿ ಮೋದಿ
ನರೇಂದ್ರ ಮೋದಿ | PC: PTI
ಟಾಂಕ್ ಸವಾಯಿ ಮಾಧೋಪುರ್ (ರಾಜಸ್ಥಾನ): ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಕಡಿತಗೊಳಿಸಿ, ಅದನ್ನು ಮುಸ್ಲಿಮರಿಗೆ ಹಂಚಲು ಕಾಂಗ್ರೆಸ್ ಉದ್ದೇಶಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಟಾಂಕ್-ಸವಾಯಿ ಮಾಧೋಪುರ್ ನಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಸಂವಿಧಾನದೊಂದಿಗೆ ಹುಡುಗಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.
“2004ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ, ಆಂಧ್ರಪ್ರದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಂದ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ನಿರ್ಧರಿಸಿತ್ತು. ಆದರೆ, ಅದರಲ್ಲಿ ವಿಫಲವಾಯಿತು. 2011ರಲ್ಲಿ ಈ ಮೀಸಲಾತಿಯನ್ನು ದೇಶಾದ್ಯಂತ ಜಾರಿಗೊಳಿಸಲು ಪ್ರಯತ್ನಿಸಿತ್ತು. ಹಾಗೆ ಮಾಡುವುದು ಸಂವಿಧಾನಕ್ಕೆ ವಿರುದ್ಧ ಎಂಬುದನ್ನೂ ಅರಿಯದೆ ಅವರು ಹಾಗೆ ಮಾಡಿದ್ದರು. ಅವರು ಸಂವಿಧಾನವನ್ನಾಗಲಿ ಅಥವಾ ಬಿ.ಆರ್.ಅಂಬೇಡ್ಕರ್ ಅವರನ್ನಾಗಲಿ ಲೆಕ್ಕಕ್ಕೇ ಇಟ್ಟುಕೊಂಡಿಲ್ಲ” ಎಂದು ಮೋದಿ ದೂರಿದ್ದಾರೆ.
ರವಿವಾರ ರಾಜಸ್ಥಾನದ ಬನ್ಸ್ವಾರದಲ್ಲಿ ನಡೆದಿದ್ದ ಚುನಾವಣಾ ಸಮಾವೇಶವೊಂದರಲ್ಲಿ ದ್ವೇಷ ಭಾಷಣ ಮಾಡಿದ್ದ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ, ಜನರ ಸಂಪತ್ತನ್ನು ಮುಸ್ಲಿಮರಿಗೆ ಹಂಚಲಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.