ಅಪ್ರಾಪ್ತ ಪತ್ನಿ ಜತೆ ಒಪ್ಪಿಗೆಯ ಲೈಂಗಿಕ ಸಂಪರ್ಕವೂ ಅತ್ಯಾಚಾರ: ಬಾಂಬೆ ಹೈಕೋರ್ಟ್
PC: x.com/fpjindia
ನಾಗ್ಪುರ: ಹದಿನೆಂಟಕ್ಕಿಂತ ಕಡಿಮೆ ವಯಸ್ಸಿನ ಪತ್ನಿ ಜತೆಗಿನ ಒಪ್ಪಿತ ಲೈಂಗಿಕ ಸಂಪರ್ಕವೂ ಅತ್ಯಾಚಾರ ಎನಿಸುತ್ತದೆ ಎಂದು ಮುಂಬೈ ಹೈಕೋರ್ಟ್ ನ ನಾಗ್ಪುರ ಪೀಠ ತೀರ್ಪು ನೀಡಿದೆ.
ಇಂಡೆಪೆಂಡೆಂಟ್ ಥಾಟ್ ಮತ್ತು ಭಾರತ ಸರ್ಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಆಧಾರದಲ್ಲಿ ಹೈಕೋರ್ಟ್, ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ. ಭಾರತೀಯ ದಂಡಸಂಹಿತೆಯಡಿ ನೀಡಿರುವ ವೈವಾಹಿಕ ಅತ್ಯಾಚಾರದ ವಿನಾಯ್ತಿಯನ್ನು ಅಪ್ರಾಪ್ತ ವಯಸ್ಸಿನವರಿಗೆ ವಿಸ್ತರಿಸುವಂತಿಲ್ಲ ಎಂದು ನ್ಯಾಯಮೂರ್ತಿ ಗೋವಿಂದ ಸನಪ್ ತೀರ್ಪು ನೀಡಿದ್ದಾರೆ. ವಿವಾಹ ಬಂಧನಕ್ಕೆ ಒಳಪಟ್ಟಿದ್ದರೂ, 18 ವರ್ಷಕ್ಕಿಂತ ಕೆಳ ವಯಸ್ಸಿನ ಯುವತಿ ಜತೆಗಿನ ಸಂಭೋಗ ಅತ್ಯಾಚಾರವಾಗಿ ಪರಿಗಣಿಸ್ಪಡುತ್ತದೆ ಎಂದು ಸ್ಪಷ್ಟಪಡಿಸಿದರು.
ಈ ಪ್ರಕರಣ 2019ಕ್ಕೆ ಸಂಬಂಧಿಸಿದ್ದಾಗಿದ್ದು, ಅಪ್ರಾಪ್ತ ವಯಸ್ಸಿನ ಯುವತಿ ಮೂರು ನಾಲ್ಕು ವರ್ಷಗಳಿಂದ ಆರೋಪಿಯ ಜತೆ ಸಂಬಂಧ ಹೊಂದಿದ್ದಳು. ವಾರ್ಧಾ ನಿವಾಸಿಯಾಗಿದ್ದ ಯುವತಿ ಆ ವ್ಯಕ್ತಿ ಜತೆಗೆ ಲೈಂಗಿಕತೆಯನ್ನು ನಿರಾಕರಿಸಿದ್ದಳು. ಹಣಕಾಸು ಅಡಚಣೆ ಕಾರಣದಿಂದ ಆಕೆ ಬೇರೆ ಊರಿಗೆ ಸ್ಥಳಾಂತರಗೊಂಡರೂ, ವ್ಯಕ್ತಿ ಆಕೆಯನ್ನು ಹಿಂಬಾಲಿಸಿದ್ದ.
ಕೆಲಸಕ್ಕೆ ಕರೆದೊಯ್ಯುವ ನೆಪದಲ್ಲಿ ಆ ವ್ಯಕ್ತಿ ಆಕೆಯ ವಿಶ್ವಾಸ ಸಂಬಂಧಿಸಿ, ವಿವಾಹದ ಭರವಸೆ ನೀಡಿ ಲೈಂಗಿಕ ಸಂಬಂಧ ಬೆಳೆಸಿದ್ದ. ಆಕೆ ಗರ್ಭಿಣಿಯಾಗಿದ್ದು, ಬಳಿಕ ಗಡಿಬಿಡಿಯಲ್ಲಿ ಆಕೆಯನ್ನು ಆರೋಪಿ ವಿವಾಹವಾಗಿದ್ದ.