ಕ್ಷೇತ್ರ ಪುನರ್ವಿಂಗಡಣೆ ವಿವಾದ ; ಸ್ಟಾಲಿನ್ ಬೆಂಬಲಕ್ಕೆ ನಿಂತ ತೆಲಂಗಾಣ ಸಿಎಂ ರೇವಂತ್ ರೆಡ್ಡಿ

ಎ. ರೇವಂತ್ ರೆಡ್ಡಿ | PC : PTI
ಹೈದರಾಬಾದ್: ಕ್ಷೇತ್ರ ಪುನರ್ವಿಂಗಡಣೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನಿಲುವಿಗೆ ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬಿಜೆಪಿ ದಕ್ಷಿಣ ರಾಜ್ಯಗಳನ್ನು ದಂಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದಕ್ಷಿಣ ರಾಜ್ಯಗಳ ವಿರುದ್ಧ ಸಂಚು ನಡೆಸುತ್ತಿದೆ. ಇದು ದಕ್ಷಿಣದ ರಾಜ್ಯಗಳ ಕ್ಷೇತ್ರ ಪುನರ್ವಿಂಗಡಣೆ ಅಲ್ಲ, ಬದಲಾಗಿ ಅವುಗಳಿಗೆ ಮಿತಿ ಕಲ್ಪಿಸುವುದು ಎಂದು ಅವರು ಹೇಳಿದ್ದಾರೆ.
ಸಂಸದೆ ಕನ್ನಿಮೋಳಿ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂನ ನಾಯಕರ ನಿಯೋಗ ದಿಲ್ಲಿಯಲ್ಲಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿದೆ. ಅಲ್ಲದೆ ಕ್ಷೇತ್ರ ಪುನರ್ವಿಗಂಡಣೆ ಕುರಿತ ಸಭೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದ ಸ್ಟಾಲಿನ್ ಅವರ ಪತ್ರವನ್ನು ಅವರಿಗೆ ಹಸ್ತಾಂತರಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನಿಲುವನ್ನು ನಾನು ಸ್ವಾಗತಿಸುತ್ತೇನೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರೇವಂತ್ ರೆಡ್ಡಿ, ದಕ್ಷಿಣ ರಾಜ್ಯಗಳ ಜನರು ಬಿಜೆಪಿಯನ್ನು ಎಂದಿಗೂ ಬೆಳೆಯಲು ಬಿಡುವುದಿಲ್ಲ. ಆದುದರಿಂದ ಅವರ ಜೊತೆಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಬಿಜೆಪಿ ಇದನ್ನೆಲ್ಲಾ ಮಾಡುತ್ತಿದೆ. ಬಿಜೆಪಿ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಅವರು ಹೇಳಿದರು.
ತಾನು ತಮಿಳುನಾಡಿನ ಬೇಡಿಕೆಯನ್ನು ತಾತ್ವಿಕವಾಗಿ ಒಪ್ಪಿಕೊಂಡಿದ್ದೇನೆ. ಕಾಂಗ್ರೆಸ್ ಹೈಕಮಾಂಡ್ ನ ಅನುಮತಿ ಕೋರಿದ ಬಳಿಕ ನಾನು ಸಭೆಯಲ್ಲಿ ಪಾಲ್ಗೊಳ್ಳಲಿದ್ದೇನೆ. ಬುಧವಾರ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸ್ಟಾಲಿನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘‘ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿರುವ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಹಾಗೂ ಸಂವಿಧಾನದ ಒಕ್ಕೂಟ ತತ್ವಕ್ಕೆ ವಿರುದ್ಧವಾದ ಕೇಂದ್ರ ಸರಕಾರದ ಎಲ್ಲಾ ಕ್ರಮಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಖಂಡಿಸುತ್ತೇವೆ’’ ಎಂದು ಸಿದ್ಧರಾಮಯ್ಯ ಹೇಳಿದ್ದರು.
ಲೋಕಸಭಾ ಸ್ಥಾನಗಳನ್ನು ನಿರ್ಧರಿಸಲು ನೂತನ ಕ್ಷೇತ್ರ ಪುನವಿಂಗಡಣೆ ಪ್ರಕ್ರಿಯೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತೀವ್ರವಾಗಿ ವಿರೋಧಿಸಿದ್ದಾರೆ. ದಕ್ಷಿಣ ರಾಜ್ಯಗಳಲ್ಲಿ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದರಿಂದ ಸಂಸತ್ತಿನಲ್ಲಿ ಅವುಗಳ ಪ್ರಾತಿನಿಧ್ಯ ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂದು ಪ್ರಮುಖ ಪ್ರತಿಪಕ್ಷಗಳ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.
ಸ್ಟಾಲಿನ್ ಅವರು ಹಿಂದೆ ಈ ಕುರಿತಂತೆ ಸರ್ವ ಪಕ್ಷಗಳ ಸಭೆ ಆಯೋಜಿಸಿದ್ದರು.