ಅಧಿಕಾರದಲ್ಲಿದ್ದವರನ್ನು ರಕ್ಷಿಸಲು ಸಂವಿಧಾನಕ್ಕೆ ತಿದ್ದುಪಡಿಗಳನ್ನು ತಂದಿದ್ದರು: ಇಂದಿರಾ, ನೆಹರು ವಿರುದ್ಧ ನಿರ್ಮಲಾ ಸೀತಾರಾಮನ್ ವಾಗ್ದಾಳಿ
ರಾಜ್ಯಸಭೆಯಲ್ಲಿ ಸಂವಿಧಾನ ಕುರಿತು ಚರ್ಚೆ
ನಿರ್ಮಲಾ ಸೀತಾರಾಮನ್ (Photo: SansadTV)
ಹೊಸದಿಲ್ಲಿ: ಸಂವಿಧಾನವು ಕಾಲದ ಪರೀಕ್ಷೆಯಲ್ಲಿ ಗೆದ್ದಿದೆ ಎಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ರಾಜ್ಯಸಭೆಯಲ್ಲಿ ಪ್ರತಿಪಾದಿಸಿದರು.
ಕಾಂಗ್ರೆಸ್ ಪಕ್ಷ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಸೀತಾರಾಮನ್,ಅವರು ಅಧಿಕಾರದಲ್ಲಿದ್ದವರನ್ನು ರಕ್ಷಿಸಲು ಸಂವಿಧಾನಕ್ಕೆ ತಿದ್ದುಪಡಿಗಳನ್ನು ತಂದಿದ್ದರು,ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಅಲ್ಲ ಎಂದು ಆರೋಪಿಸಿದರು.
ಸದನದಲ್ಲಿ ಸಂವಿಧಾನದ 75 ವರ್ಷಗಳ ಕುರಿತು ಚರ್ಚೆಯನ್ನು ಆರಂಭಿಸಿದ ಅವರು ಕಠಿಣ ಸವಾಲುಗಳ ನಡುವೆ ಭಾರತಕ್ಕಾಗಿ ಸಂವಿಧಾನವನ್ನು ರೂಪಿಸಿದ್ದ 15 ಮಹಿಳೆಯರು ಸೇರಿದಂತೆ ಸಂವಿಧಾನ ಸಭೆಯ 389 ಸದಸ್ಯರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಿದರು.
ದೇಶವು ತನ್ನ ಸಂವಿಧಾನದ 75ನೇ ವರ್ಷವನ್ನು ಆಚರಿಸುತ್ತಿರುವಾಗ ಈ ಪವಿತ್ರ ದಾಖಲೆಯಲ್ಲಿ ವ್ಯಕ್ತಪಡಿಸಲಾಗಿರುವ ಆಶಯವನ್ನು ಎತ್ತಿಹಿಡಿಯುವ,ಭಾರತ ನಿರ್ಮಾಣಕ್ಕಾಗಿ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ಸಮಯವು ಬಂದಿದೆ ಎಂದು ಹೇಳಿದ ಸೀತಾರಾಮನ್,‘ಎರಡನೇ ಮಹಾಯುದ್ಧದ ಬಳಿಕ 50ಕ್ಕೂ ಹೆಚ್ಚು ದೇಶಗಳು ಸ್ವತಂತ್ರಗೊಂಡಿದ್ದು,ತಮ್ಮದೇ ಆದ ಸಂವಿಧಾನಗಳನ್ನು ರೂಪಿಸಿಕೊಂಡಿದ್ದವು. ಆದರೆ ಅನೇಕ ದೇಶಗಳು ತಮ್ಮ ಸಂವಿಧಾನಗಳನ್ನು ಬದಲಿಸಿವೆ,ಅವುಗಳನ್ನು ಕೇವಲ ತಿದ್ದುಪಡಿ ಮಾಡಲಿಲ್ಲ,ಅಕ್ಷರಶಃ ಸಂವಿಧಾನದ ಸಂಪೂರ್ಣ ವೈಶಿಷ್ಟ್ಯಗಳನ್ನು ಬದಲಿಸಿವೆ. ನಮ್ಮ ಸಂವಿಧಾನವು ಹಲವಾರು ತಿದ್ದುಪಡಿಗಳಿಗೆ ಒಡ್ಡಿಕೊಂಡಿದ್ದರೂ ಕಾಲದ ಪರೀಕ್ಷೆಯಲ್ಲಿ ಅದು ಗೆದ್ದಿದೆ’ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಅವರು,ಅದು ‘ರಾಜವಂಶಕ್ಕೆ ನೆರವಾಗಲು’ ನಿರ್ಲಜ್ಜವಾಗಿ ಸಂವಿಧಾನಕ್ಕೆ ತಿದ್ದುಪಡಿಗಳನ್ನು ತರುತ್ತಲೇ ಇತ್ತು ಎಂದು ಆರೋಪಿಸಿದರು.
ಮಾಜಿ ಪ್ರಧಾನಿ ಜವಾಹರಲಾಲ ನೆಹರು ವಿರುದ್ಧವೂ ತೀಕ್ಷ್ಣ ದಾಳಿಯನ್ನು ನಡೆಸಿದ ಸೀತಾರಾಮನ್,ಅವರು ಸಾರ್ವಜನಿಕವಾಗಿ ಪತ್ರಿಕಾ ಸ್ವಾತಂತ್ರ್ಯವನ್ನು ಹೊಗಳಿದ್ದರೂ ಮಾಧ್ಯಮಗಳಿಂದ ತನ್ನ ಸರಕಾರದ ವಿಮರ್ಶೆಗಳ ವಿರುದ್ಧ ಅಸಮಾಧಾನವನ್ನು ಹೊಂದಿದ್ದರು,ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
1950ರಲ್ಲಿ ನೆಹರು ನೇತೃತ್ವದ ಮಧ್ಯಂತರ ಸರಕಾರವು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸಾಂವಿಧಾನಿಕ ತಿದ್ದುಪಡಿಯನ್ನು ತಂದಿತ್ತು ಎಂದೂ ಅವರು ಆರೋಪಿಸಿದರು.
1950ರಲ್ಲಿ ಸರ್ವೋಚ್ಚ ನ್ಯಾಯಾಲಯವು ಕಮ್ಯುನಿಸ್ಟ್ ನಿಯತಕಾಲಿಕ ‘ಕ್ರಾಸ್ ರೋಡ್ಸ್’ಮತ್ತು ಆರೆಸ್ಸೆಸ್ ಮುಖವಾಣಿ ‘ಆರ್ಗನೈಜರ್’ ಪರವಾಗಿ ತೀರ್ಪು ನೀಡಿತ್ತು. ಇದಕ್ಕೆ ಪ್ರತಿಯಾಗಿ ಆಗಿನ ಮಧ್ಯಂತರ ಸರಕಾರವು ಮೊದಲ ಸಾಂವಿಧಾನಿಕ ತಿದ್ದುಪಡಿಯನ್ನು ತರುವ ಅಗತ್ಯವಿದೆ ಎಂದು ಭಾವಿಸಿತ್ತು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಕಾಂಗ್ರೆಸ್ ತಂದಿದ್ದ ಆ ತಿದ್ದುಪಡಿಯ ಮೂಲಭೂತ ಉದ್ದೇಶವಾಗಿತ್ತು. ಇಂದಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೆಮ್ಮೆ ಪಡುತ್ತಿರುವ ಪ್ರಜಾಪ್ರಭುತ್ವ ದೇಶ ಭಾರತವು ಮೊದಲ ಮಧ್ಯಂತರ ಸರಕಾರವು ಸಂವಿಧಾನ ಅಂಗೀಕಾರಗೊಂಡ ಒಂದೇ ವರ್ಷದಲ್ಲಿ ಭಾರತೀಯರ ವಾಕ್ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸಾಂವಿಧಾನಿಕ ತಿದ್ದುಪಡಿಯನ್ನು ತಂದಿದ್ದಕ್ಕೆ ಸಾಕ್ಷಿಯಾಗಿತ್ತು ಎಂದು ಸೀತಾರಾಮನ್ ಹೇಳಿದರು.
ರಾಜ್ಯಸಭೆಯಲ್ಲಿ ಸಂವಿಧಾನದ ಮೇಲೆ ಚರ್ಚೆಯು ಮಂಗಳವಾರವೂ ಮುಂದುವರಿಯಲಿದೆ.
ಸಮಯದ ನಿರ್ಬಂಧವಿಲ್ಲ ಮತ್ತು ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಲು ಬಯಸುವ ಎಲ್ಲರಿಗೂ ಚರ್ಚೆಯ ಅವಧಿಯನ್ನು ವಿಸ್ತರಿಸಿ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಸಭಾಪತಿ ಜಗದೀಪ ಧನ್ಕರ್ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.