ಬಡ, ದುರ್ಬಲ ವರ್ಗಗಳ ರಕ್ಷಣೆಗೆ ಸಂವಿಧಾನ ಶಕ್ತಿಶಾಲಿ ಅಸ್ತ್ರ: ರಾಹುಲ್ ಗಾಂಧಿ
‘‘ಪ್ರಧಾನಿ ಮೋದಿ ಸಂವಿಧಾನ ಓದಿಲ್ಲ ಎಂದು ಭರವಸೆ ನೀಡುತ್ತೇನೆ!’’
ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ : ಸಂವಿಧಾನದ ಆಶಯಗಳನ್ನು ರಕ್ಷಿಸುವಂತೆ ಕಾಂಗ್ರೆಸ್ ಮಂಗಳವಾರ ದೇಶದ ಜನತೆಯನ್ನು ಒತ್ತಾಯಿಸಿದೆ. ಭಾರತದ ಮೂಲ ತತ್ವಗಳನ್ನು ರಕ್ಷಿಸುವ ಜನರ ಹೋರಾಟವು ಸಂವಿಧಾನದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಪುನಶ್ಚೇತನಗೊಳ್ಳಬೇಕು ಎಂದು ಅದು ಹೇಳಿದೆ.
ಸಮಾಜದ ಅತ್ಯಂತ ಬಡ ಮತ್ತು ಅತ್ಯಂತ ದುರ್ಬಲ ವರ್ಗಗಳ ರಕ್ಷಣೆಗೆ ಸಂವಿಧಾನವು ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದರು. ‘‘ಸಂವಿಧಾನವು ಬಲಿಷ್ಠಗೊಂಡಷ್ಟೂ ದೇಶವು ಬಲಗೊಳ್ಳುತ್ತದೆ’’ ಎಂದು ಅವರು ಹೇಳಿದರು.
‘‘ಸಂವಿಧಾನವನ್ನು ನಾಶಗೊಳಿಸಲು ಹೊರಟಿರುವವರು ಅದರ ಬಗ್ಗೆ ಅಪ್ರಾಮಾಣಿಕ ಬದ್ಧತೆಯನ್ನು ತೋರಿಸುತ್ತಿರುವ ಹೊತ್ತಿನಲ್ಲಿ, ಅದನ್ನು ರಕ್ಷಿಸುವುದು ಮತ್ತು ಅದರ ನೈಜ ಮೌಲ್ಯಗಳಿಗಾಗಿ ಹೋರಾಡುವುದು ನಮ್ಮ ಕರ್ತವ್ಯವಾಗಿದೆ’’ ಎಂದು ರಾಹುಲ್ ಹೇಳಿದರು.
ಸಂವಿಧಾನದಲ್ಲಿ ವ್ಯಕ್ತಪಡಿಸಲಾಗಿರುವ ಪ್ರತಿಯೊಂದು ಚಿಂತನೆಯನ್ನು ರಕ್ಷಿಸಲು ಭಾರತದ ಪ್ರಜೆಗಳೆಲ್ಲರೂ ಒಂದಾಗಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
‘‘ಸಂವಿಧಾನ ಅಂಗೀಕಾರಗೊಂಡ 75ನೇ ವರ್ಷ ಇಂದು ಆರಂಭವಾಗಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ನಾನು ಪ್ರತಿಯೋರ್ವ ಭಾರತೀಯರಿಗೂ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ’’ ಎಂದು ಕಾಂಗ್ರೆಸ್ ಅಧ್ಯಕ್ಷರು ‘ಎಕ್ಸ್’ನಲ್ಲಿ ಬರೆದಿದ್ದಾರೆ.
‘‘ನಮ್ಮ ಪೂರ್ವಜರು ಅತ್ಯಂತ ಜಾಗರೂಕತೆ ಮತ್ತು ಶ್ರದ್ಧೆಯಿಂದ ರೂಪಿಸಿರುವ ಭಾರತೀಯ ಸಂವಿಧಾನವು ನಮ್ಮ ದೇಶದ ಜೀವನಾಡಿಯಾಗಿದೆ. ಅದು ನಮಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳನ್ನು ನೀಡುತ್ತದೆ. ಅದು ಭಾರತವನ್ನು ಸಾರ್ವಭೌಮ ಸಮಾಜವಾದಿ ಪ್ರಜಾಪ್ರಭುತ್ವ ಗಣರಾಜ್ಯವನ್ನಾಗಿ ರೂಪಿಸುತ್ತದೆ’’ ಎಂದು ಖರ್ಗೆ ಹೇಳಿದರು.
‘‘ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಕೇವಲ ಆದರ್ಶಗಳು ಅಥವಾ ಕಲ್ಪನೆಗಳಲ್ಲ. ಅವುಗಳು 140 ಕೋಟಿ ಭಾರತೀಯರ ಜೀವನ ವಿಧಾನವಾಗಿವೆ’’ ಎಂದು ಕಾಂಗ್ರೆಸ್ ಅಧ್ಯಕ್ಷರು ನುಡಿದರು.
►‘‘ಪ್ರಧಾನಿ ಮೋದಿ ಸಂವಿಧಾನ ಓದಿಲ್ಲ ಎಂದು ಭರವಸೆ ನೀಡುತ್ತೇನೆ!’’
ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನ ದಿನಾಚರಣೆಗಳಲ್ಲಿ ಭಾಗವಹಿಸುತ್ತಾರಾದರೂ, ಸಂವಿಧಾನವನ್ನು ಅವರು ಓದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ. ಅವರು ಸಂವಿಧಾನವನ್ನು ಓದಿದ್ದರೆ, ಅವರು ಈಗ ಪ್ರತಿದಿನ ಏನು ಮಾಡುತ್ತಿದ್ದಾರೋ ಹಾಗೆ ಮಾಡುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
‘‘ಸಂವಿಧಾನ ದಿನದ ಸಂದರ್ಭದಲ್ಲಿ ನರೇಂದ್ರ ಮೋದೀಜಿ ಮತ್ತು ಬಿಜೆಪಿ ಸರಕಾರ ಸಂಸತ್ನಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಿದೆ. ಇದು ಭಾರತದ ಸಂವಿಧಾನ. ಅದನ್ನು ನರೇಂದ್ರ ಮೋದೀಜಿ ಎಂದೂ ಓದಿಲ್ಲ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ. ಓದಿದ್ದರೆ, ಅವರು ಈಗ ಪ್ರತಿದಿನ ಏನು ಮಾಡುತ್ತಿದ್ದಾರೋ ಅವುಗಳನ್ನು ಮಾಡುತ್ತಿರಲಿಲ್ಲ’’ ಎಂದು ದಿಲ್ಲಿಯ ತಲ್ಕಟೋರ ಸ್ಟೇಡಿಯಮ್ನಲ್ಲಿ ನಡೆದ ಸಂವಿಧಾನ ರಕ್ಷಕ್ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಹೇಳಿದರು.
‘‘ಅದರಲ್ಲಿ (ಸಂವಿಧಾನದಲ್ಲಿ) ಸಾವರ್ಕರ್ರ ಧ್ವನಿ ಇದೆಯೇ? ಹಿಂಸೆಯನ್ನು ಬಳಸಿಕೊಳ್ಳಬೇಕು, ಜನರನ್ನು ಕೊಲ್ಲಬೇಕು ಅಥವಾ ಸುಳ್ಳುಗಳನ್ನು ಹೇಳುವ ಮೂಲಕ ಸರಕಾರ ನಡೆಸಬೇಕು ಎಂಬುದಾಗಿ ಅದರಲ್ಲಿ ಎಲ್ಲಿಯಾದರೂ ಬರೆದಿದೆಯೇ? ಇದು ಸತ್ಯ ಮತ್ತು ಅಹಿಂಸೆಯ ಪುಸ್ತಕ’’ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ನುಡಿದರು.