ಇಂಡಿಯಾ ಒಕ್ಕೂಟದ ಮುಂದುವರಿದ ಗೆಲುವಿನ ಯಾನ | ಉಪಚುನಾವಣೆ ; 13 ಕ್ಷೇತ್ರಗಳ ಪೈಕಿ 10ರಲ್ಲಿ ಗೆಲುವು
ಸಾಂದರ್ಭಿಕ ಚಿತ್ರ
ಲೋಕಸಭೆ ಚುನಾವಣೆ ಬಳಿಕ ವಿಧಾನಸಭೆ ಉಪಚುನಾವಣೆಗಳಲ್ಲೂ ಇಂಡಿಯಾ ಮೈತ್ರಿಕೂಟದ ಗೆಲುವಿನ ಯಾನ ಮುಂದುವರಿದಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಠಿಣ ಪೈಪೋಟಿ ನೀಡಿದ್ದ ಇಂಡಿಯಾ ಮೈತ್ರಿಕೂಟ ಇದೀಗ ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದರಲ್ಲಿ ಸಫಲವಾಗಿದೆ.
ಇದು ದೊಡ್ಡ ಮಟ್ಟದಲ್ಲಿಯೇ ಸೋಲು ಕಂಡಿರುವ ಬಿಜೆಪಿಗೆ ಮುಂದಿನ ದಿನಗಳಲ್ಲಿ ಇದು ತಳಮಳದ ವಿಷಯವಾಗಿ ಕಾಡಲಿದೆಯೆ? ಎಂಬ ಪ್ರಶ್ನೆ ಹುಟ್ಟುಹಾಕಿದೆ. ಇದ್ದ ಸ್ಥಾನಗಳಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದವರಲ್ಲಿ ಹಲವರಿಗೆ ಜನರು ಪಾಠ ಕಲಿಸಿದಂತಿದೆ.
ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ, ಬಿಹಾರ ಮತ್ತು ತಮಿಳುನಾಡಿನ ವಿವಿಧ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆದಿದ್ದವು. ಇಂಡಿಯಾ ಮೈತ್ರಿಕೂಟದಿಂದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಎಎಪಿ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಹಲವೆಡೆ ವಿಶೇಷವಾಗಿ ಪಂಜಾಬಿನಲ್ಲಿ ಮತ್ತು ಹಿಮಾಚಲ ಪ್ರದೇಶದ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಅಲ್ಲಿಯ ಮುಖ್ಯಮಂತ್ರಿಗಳಾದ ಭಗವಂತ್ ಮಾನ್ ಮತ್ತು ಸುಖವಿಂದರ್ ಸಿಂಗ್ ಸುಖು ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.
ಒಟ್ಟಾಗಿ 13 ಕ್ಷೇತ್ರಗಳ ಪೈಕಿ 10ರಲ್ಲಿ ಇಂಡಿಯಾ ಮೈತ್ರಿಕೂಟ ಗೆಲುವು ಸಾಧಿಸಿದೆ ಮತ್ತು ಬಿಜೆಪಿ ಕೇವಲ 2 ಕ್ಷೇತ್ರದಲ್ಲಿ ಗೆದ್ದಿದೆ. ಒಂದು ಕ್ಷೇತ್ರವನ್ನು ಪಕ್ಷೇತರ ಅಭ್ಯರ್ಥಿ ಗೆದ್ದುಕೊಂಡಿದ್ದಾರೆ. ಪಂಜಾಬ್ನಲ್ಲಿ ಎಎಪಿಯ ಮೊಹಿಂದರ್ ಭಗತ್ ಅವರು ಜಲಂಧರ್ ಪಶ್ಚಿಮ ಕ್ಷೇತ್ರದಲ್ಲಿ 23,000 ಮತಗಳ ಅಂತರದಿಂದ ಗೆದ್ದಿದ್ದಾರೆ. ಭಗತ್ 55,246 ಮತಗಳನ್ನು ಪಡೆದರೆ, ಬಿಜೆಪಿಯ ಅಂಗುರಲ್ 17,921 ಮತಗಳನ್ನು ಪಡೆದರು. ಮೂರನೇ ಸ್ಥಾನದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಸುರಿಂದರ್ ಕೌರ್ 16,757 ಮತಗಳನ್ನು ಪಡೆದರು.
ಈಗ ಬಿಜೆಪಿಯಿಂದ ಸ್ಪರ್ಧಿಸಿದ ಅಂಗುರಲ್ ಎಎಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಆ ಸ್ಥಾನ ತೆರವಾದ ಹಿನ್ನೆಲೆಯಲ್ಲಿ ಉಪಚುನಾವಣೆ ಅನಿವಾರ್ಯವಾಗಿತ್ತು. ಅವರು ಮಾರ್ಚ್ನಲ್ಲಿ ಬಿಜೆಪಿ ಸೇರಿದ್ದರು.
ಹಿಮಾಚಲ ಪ್ರದೇಶದ ಇಬ್ಬರು ಪಕ್ಷೇತರ ಶಾಸಕರಿಗೆ, ರಾಜೀನಾಮೆ ನೀಡಿ ಬಿಜೆಪಿಗೆ ಸೇರಿಕೊಂಡದ್ದು ದುಬಾರಿಯಾಗಿ ಪರಿಣಮಿಸಿದೆ. ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಅವರು ಸೋಲು ಅನುಭವಿಸಿದ್ದಾರೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ಪತ್ನಿ, ಕಾಂಗ್ರೆಸ್ ಅಭ್ಯರ್ಥಿ ಕಮಲೇಶ್ ಠಾಕೂರ್ ಅವರು ಬಿಜೆಪಿಯ ಹೋಶಿಯಾರ್ ಸಿಂಗ್ ಅವರನ್ನು ಡೆಹ್ರಾ ಕ್ಷೇತ್ರದಲ್ಲಿ 9,399 ಮತಗಳ ಅಂತರದಿಂದ ಸೋಲಿಸಿದ್ದಾರೆ.
ನಲಗಢ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ಹರ್ದೀಪ್ ಸಿಂಗ್ ಬಾವಾ ತಮ್ಮ ಸಮೀಪದ ಪ್ರತಿಸ್ಪರ್ಧಿ ಹಾಗೂ ಬಿಜೆಪಿ ಅಭ್ಯರ್ಥಿ ಕೆ ಎಲ್ ಠಾಕೂರ್ ಅವರನ್ನು 8,990 ಮತಗಳಿಂದ ಸೋಲಿಸಿದ್ದಾರೆ. ಬಾವಾ ಅವರು ಐದು ಬಾರಿ ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
ಬಿಜೆಪಿಯ ಆಶಿಶ್ ಶರ್ಮಾ ಸಮೀಪದ ಪ್ರತಿಸ್ಪರ್ಧಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪುಷ್ಪೇಂದರ್ ವರ್ಮಾ ಅವರಿಗಿಂತ 1,571 ಮತ ಹೆಚ್ಚು ಗಳಿಸುವ ಮೂಲಕ ಹಮೀರ್ಪುರ ಕ್ಷೇತ್ರದಿಂದ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾದರು.
ಉಪಚುನಾವಣೆ ಫಲಿತಾಂಶಗಳ ನಂತರ ಇದೀಗ ಮೊದಲ ಬಾರಿಗೆ ರಾಜ್ಯದ ಚುನಾವಣಾ ಇತಿಹಾಸದಲ್ಲಿ ಪತಿ-ಪತ್ನಿ ವಿಧಾನಸಭೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿಎಂ ಸುಖವಿಂದರ್ ಸುಖು ಮತ್ತು ಕಮಲೇಶ್ ಠಾಕೂರ್ ಇಬ್ಬರೂ ಇದೀಗ ಹಿಮಾಚಲ ಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದಾರೆ.
ಅಷ್ಟೇ ಅಲ್ಲದೆ, ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭೆಯಲ್ಲಿ ಪಕ್ಷೇತರ ಶಾಸಕರು ಇಲ್ಲದಂತಾಗಿದೆ. 2022ರ ಅಸೆಂಬ್ಲಿ ಚುನಾವಣೆಯಲ್ಲಿ, ಹೋಶಿಯಾರ್ ಸಿಂಗ್ (ಡೆಹ್ರಾ), ಆಶಿಶ್ ಶರ್ಮಾ (ಹಮೀರ್ಪುರ್) ಮತ್ತು ಕೆ ಎಲ್ ಠಾಕೂರ್ (ನಲಾಗರ್) ಎಂಬ ಮೂವರು ಪಕ್ಷೇತರರಾಗಿ ಚುನಾಯಿತರಾಗಿದ್ದರು. ಆದರೆ ಫೆಬ್ರವರಿ 27ರಂದು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ಗೆ ಮತ ಹಾಕಿದ ನಂತರ ಅವರು ರಾಜೀನಾಮೆ ನೀಡಿದರು. ಆರು ಕಾಂಗ್ರೆಸ್ ಬಂಡಾಯಗಾರರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಅಡ್ಡ ಮತದಾನ ಮಾಡಿ ನಂತರ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ಪಕ್ಷೇತರ ಶಾಸಕರು ಮಾರ್ಚ್ 22 ರಂದು ರಾಜೀನಾಮೆ ನೀಡಿ ಮರುದಿನ ಬಿಜೆಪಿ ಸೇರಿದರು. ಮೂವರು ಪಕ್ಷೇತರರ ರಾಜೀನಾಮೆಯನ್ನು ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಜೂನ್ 3ರಂದು ಅಂಗೀಕರಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ಮಾಣಿಕ್ತಾಲಾ, ಬಗ್ದ, ರಣಘಾಟ್ ದಕ್ಷಿಣ ಮತ್ತು ರಾಯಗಂಜ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿಗಳಾದ ಕೃಷ್ಣ ಕಲ್ಯಾಣಿ ಮತ್ತು ಮಧುಪರ್ಣ ಠಾಕೂರ್ ಕ್ರಮವಾಗಿ ರಾಯ್ಗಂಜ್ ಮತ್ತು ಬಾಗ್ಡಾದಲ್ಲಿ ಗೆಲುವು ಸಾಧಿಸಿದರೆ, ಮುಕುತ್ ಮಣಿ ಅಧಿಕಾರಿ ಮತ್ತು ಸುಪ್ತಿ ಪಾಂಡೆ ರಣಘಾಟ್ ದಕ್ಷಿಣ ಮತ್ತು ಮಾಣಿಕ್ತಾಲಾದಲ್ಲಿ ಗೆದ್ದಿದ್ದಾರೆ.
ಉತ್ತರ ದಿನಾಜ್ಪುರ ಜಿಲ್ಲೆಯ ರಾಯಗಂಜ್ನಲ್ಲಿ ಕಲ್ಯಾಣಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಾನಸ್ ಕುಮಾರ್ ಘೋಷ್ ಅವರ ವಿರುದ್ಧ 50,077 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಕಲ್ಯಾಣಿ 86,479 ಮತಗಳನ್ನು ಪಡೆದರೆ, ಘೋಷ್ 36,402 ಮತಗಳನ್ನು ಪಡೆದರು.
2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಲ್ಲಿ ಗೆದ್ದ ಕೃಷ್ಣ ಕಲ್ಯಾಣಿ ಟಿಎಂಸಿ ಸೇರಿದ ನಂತರ ಈ ಕ್ಷೇತ್ರದಲ್ಲಿ ಉಪಚುನಾವಣೆ ಅನಿವಾರ್ಯವಾಗಿತ್ತು. ಉತ್ತರ 24 ಪರಗಣ ಜಿಲ್ಲೆಯ ಬಾಗ್ದಾ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ರಾಜ್ಯಸಭಾ ಸಂಸದೆ ಮತ್ತು ಮಟುವಾ ನಾಯಕಿ ಮಮತಾಬಾಲಾ ಠಾಕೂರ್ ಅವರ ಪುತ್ರಿ ಮಧುಪರ್ಣಾ ಠಾಕೂರ್, ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬಿನಯ್ ಕುಮಾರ್ ಬಿಸ್ವಾಸ್ ವಿರುದ್ಧ 33,455 ಮತಗಳ ಅಂತರದಿಂದ ಗೆದ್ದಿದ್ದಾರೆ. ಮಧುಪರ್ಣ ಠಾಕೂರ್ 1,07,706 ಮತಗಳು ಪಡೆದರೆ, ಬಿಸ್ವಾಸ್ 74,251 ಮತ ಗಳಿಸಿದರು.
2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಲ್ಲಿ ಗೆದ್ದ ಬಿಸ್ವಜಿತ್ ದಾಸ್ ನಂತರ ಟಿಎಂಸಿ ಸೇರಿದ ಕಾರಣ ಈ ಕ್ಷೇತ್ರದಲ್ಲಿ ಉಪಚುನಾವಣೆ ಅನಿವಾರ್ಯವಾಗಿತ್ತು. ಈ ಗೆಲುವಿನೊಂದಿಗೆ ಎಂಟು ವರ್ಷಗಳ ನಂತರ ಪಶ್ಚಿಮ ಬಂಗಾಳದಲ್ಲಿ ಆಡಳಿತ ಪಕ್ಷ ಬಾಗ್ದಾವನ್ನು ಗೆದ್ದುಕೊಂಡಿದೆ.
ನಾಡಿಯಾ ಜಿಲ್ಲೆಯ ರಾಣಾಘಾಟ್-ದಕ್ಷಿಣ್ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಮುಕುತ್ ಮಣಿ ಅಧಿಕಾರಿ 39,048 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಧಿಕಾರಿ 1,13,533 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಮನೋಜ್ ಕುಮಾರ್ ಬಿಸ್ವಾಸ್ 74,485 ಮತಗಳೊಂದಿಗೆ ಎರಡನೇ ಸ್ಥಾನ ಪಡೆದರು.
2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಲ್ಲಿ ಗೆದ್ದಿದ್ದ ಮುಕುತ್ ಮಣಿ ಅಧಿಕಾರಿ ನಂತರ ಟಿಎಂಸಿ ಸೇರಿದ ಕಾರಣ ಉಪಚುನಾವಣೆ ಅನಿವಾರ್ಯವಾಗಿತ್ತು. ಕೋಲ್ಕತ್ತಾದ ಮಾಣಿಕ್ತಾಲಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಸುಪ್ತಿ ಪಾಂಡೆ ಅವರು ಬಿಜೆಪಿ ಅಭ್ಯರ್ಥಿ ಕಲ್ಯಾಣ್ ಚೌಬೆ ವಿರುದ್ಧ 62,312 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
2022 ಫೆಬ್ರವರಿ 20ರಂದು ಶಾಸಕರಾಗಿದ್ದ ಸಾಧನ್ ಪಾಂಡೆ ನಿಧನರಾದ ಕಾರಣ ಈ ಸ್ಥಾನ ತೆರವಾಗಿತ್ತು. ಆದರೆ, ಬಿಜೆಪಿ ಅಭ್ಯರ್ಥಿ ಕಲ್ಯಾಣ್ ಚೌಬೆ ಚುನಾವಣಾ ಅರ್ಜಿ ಸಲ್ಲಿಸಿದ್ದ ಕಾರಣ ಪಾಂಡೆ ನಿಧನರಾದ 6 ತಿಂಗಳ ನಂತರವೂ ಈ ಸ್ಥಾನಕ್ಕೆ ಉಪಚುನಾವಣೆ ನಡೆಸಲಾಗಲಿಲ್ಲ. ಕಲ್ಕತ್ತಾ ಹೈಕೋರ್ಟ್ನಲ್ಲಿ ಮತದಾನದಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮತಗಳ ಮರು ಎಣಿಕೆಗೆ ಚೌಬೆ ಒತ್ತಾಯಿಸಿದ್ದರು.
ಜನ ಪ್ರಾತಿನಿಧ್ಯ ಕಾಯಿದೆ, 1951 ಒಂದು ಸ್ಥಾನಕ್ಕೆ ಸಂಬಂಧಿಸಿದ ಯಾವುದೇ ಚುನಾವಣಾ ಅರ್ಜಿಯನ್ನು ನ್ಯಾಯಾಲಯದಲ್ಲಿ ಇತ್ಯರ್ಥಪಡಿಸುವವರೆಗೆ ಯಾವುದೇ ಚುನಾವಣೆ ನಡೆಸುವುದನ್ನು ನಿಷೇಧಿಸುತ್ತದೆ. 2024ರ ಏಪ್ರಿಲ್ 29ರಂದು ಚೌಬೆ ತಮ್ಮ ಚುನಾವಣಾ ಅರ್ಜಿಯನ್ನು ನ್ಯಾಯಾಲಯದಿಂದ ಹಿಂತೆಗೆದುಕೊಂಡಿದ್ದರು. ಇದರಿಂದಾಗಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲಾಯಿತು.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ದುಸ್ಥಿತಿ ಮುಂದುವರಿದಿದೆ. ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಭದ್ರಕೋಟೆ ಅಮರವಾಡ ಉಪಚುನಾವಣೆಯ ತ್ರಿಕೋನ ಸ್ಪರ್ಧೆಯಲ್ಲಿ ಬಿಜೆಪಿ ಅಭ್ಯರ್ಥಿ ಕಮಲೇಶ್ ಶಾ 3252 ಮತಗಳಿಂದ ಜಯಗಳಿಸಿದ್ದಾರೆ.
ತ್ರಿಕೋನ ಸ್ಪರ್ಧೆಯಲ್ಲಿ ಮೊದಲ ಮೂರು ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ಕಮಲೇಶ್ ಶಾ ನಂತರ ಸತತವಾಗಿ ಎರಡನೇ ಸ್ಥಾನದಲ್ಲಿದ್ದರು. ಕಾಂಗ್ರೆಸ್ನ ಧೀರನ್ ಶಾ ಮುನ್ನಡೆ ಸಾಧಿಸಿದ್ದರು. ಆದರೆ ಅಂತಿಮವಾಗಿ ಕಮಲೇಶ್ ಶಾ ಜಯ ದಾಖಲಿಸಿದರು. ಗೊಂಡ್ವಾನಾ ರಿಪಬ್ಲಿಕ್ ಪಾರ್ಟಿ ಮೂರನೇ ಸ್ಥಾನದಲ್ಲಿ ಉಳಿಯಿತು. ಕೊನೆಯ ಸುತ್ತಿನ ಮತ ಎಣಿಕೆ ನಂತರ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಮರು ಎಣಿಕೆಗೆ ಒತ್ತಾಯಿಸಿದೆ.
ಕಾಂಗ್ರೆಸ್ನ ಮಾಜಿ ಶಾಸಕ ಮತ್ತು ಪಕ್ಷದ ನಿಷ್ಠಾವಂತ ಕಮಲೇಶ್ ಅವರು ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಈ ವರ್ಷದ ಮಾರ್ಚ್ನಲ್ಲಿ ಬಿಜೆಪಿ ಸೇರಿದ ನಂತರ ಉಪಚುನಾವಣೆ ನಡೆಸಬೇಕಾಗಿ ಬಂದಿತ್ತು.
ಬಿಹಾರದ ರುಪೌಲಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶಂಕರ್ ಸಿಂಗ್ ಗೆಲುವು ಸಾಧಿಸಿದ್ದಾರೆ. ಅವರು ಜೆಡಿಯುನ ಕಲಾಧರ್ ಮಂಡಲ್ ಅವರನ್ನು 8211 ಮತಗಳಿಂದ ಸೋಲಿಸಿದರು. 12ನೇ ಸುತ್ತಿನ ಮತ ಎಣಿಕೆ ಮುಗಿದ ತಕ್ಷಣ ಶಂಕರ್ ಸಿಂಗ್ ಗೆಲುವು ದಕ್ಕಿತು. ಇಲ್ಲಿಂದ ಸತತ ನಾಲ್ಕು ಬಾರಿ ಶಾಸಕರಾಗಿದ್ದ ಭೀಮ ಭಾರತಿ ಸೋಲು ಅನುಭವಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಪುರ್ಣಿಯ ಕ್ಷೇತ್ರದಿಂದ ಸೋಲನುಭವಿಸಿದ್ದ ಅವರಿಗೆ ಈ ಸೋಲು ಭಾರಿ ಮುಖಭಂಗವಾಗಿದೆ. ಭೀಮ ಭಾರತಿ ಜೆಡಿಯು ಬಿಟ್ಟು ಆರ್ ಜೆ ಡಿ ಸೇರಿದ ಕಾರಣ ಇಲ್ಲಿ ಚುನಾವಣೆ ಅನಿವಾರ್ಯವಾಗಿತ್ತು.
ತಮಿಳುನಾಡಿನ ವಿಕ್ರವಾಂಡಿ ಉಪಚುನಾವಣೆಯಲ್ಲಿ ದ್ರಾವಿಡ ಮುನ್ನೇತ್ರ ಕಝಗಂ (ಡಿಎಂಕೆ) ಗೆಲುವು ಸಾಧಿಸಿದೆ. ಡಿಎಂಕೆಯ ಶಿವಷಣ್ಮುಗಂ ಎ 67,757 ಮತಗಳಿಂದ ಗೆದ್ದಿದ್ದಾರೆ. ಮುಂದಿನ ವಿಕ್ರವಾಂಡಿ ಶಾಸಕರಾಗಲು 29 ಅಭ್ಯರ್ಥಿಗಳು ಕಣದಲ್ಲಿದ್ದರು. ಹಾಲಿ ಶಾಸಕ ಎನ್ ಪುಗಜೆಂತಿ ಅವರ ನಿಧನದಿಂದಾಗಿ ಈ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಅನಿವಾರ್ಯವಾಗಿತ್ತು.
ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ವಿಕ್ರವಾಂಡಿ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷ ಮುನ್ನಡೆ ಸಾಧಿಸುತ್ತಿದ್ದಂತೆ ಚೆನ್ನೈನಲ್ಲಿರುವ ಪಕ್ಷದ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಸಿಹಿ ಹಂಚಿದರು.
ಏಳು ರಾಜ್ಯಗಳ 13 ವಿಧಾನಸಭಾ ಸ್ಥಾನಗಳ ಮತ ಎಣಿಕೆ ಜುಲೈ 13ರ ಬೆಳಗ್ಗೆ ಆರಂಭವಾಗಿತ್ತು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಸ್ಥಾನಗಳಿಗೆ ಜುಲೈ 10ರಂದು ಮತದಾನ ನಡೆದಿತ್ತು.