'ಗೂಂಡಾ ತೆರಿಗೆ' ನೀಡಲು ನಿರಾಕರಿಸಿದ ಗುತ್ತಿಗೆದಾರ: ಡಾಂಬರು ಕಿತ್ತುಹಾಕಿದ ಶಾಸಕನ ಸಹಚರರು
Photo: TOI
ಬರೇಲಿ: ಹೊಸ ರಸ್ತೆ ಡಾಂಬರೀಕರಣ ಕಾಮಗಾರಿ ಮಾಡಿದ ಗುತ್ತಿಗೆದಾರ 'ಗೂಂಡಾ ತೆರಿಗೆ' ನೀಡಿಲ್ಲ ಎಂಬ ಕಾರಣಕ್ಕೆ ಸ್ಥಳೀಯ ಶಾಸಕನ ಸಹಚರರ ಗುಂಪು ಜೆಸಿಬಿ ಮೂಲಕ ರಸ್ತೆಗೆ ಹಾಕಿದ್ದ ಡಾಂಬರ್ ಕಿತ್ತುಹಾಕಿರುವ ಪ್ರಕರಣ ಶಹಜಹಾನ್ಪುರದಲ್ಲಿ ಸಂಭವಿಸಿದೆ. 7 ಕಿಲೋಮೀಟರ್ ಗಳಷ್ಟು ಉದ್ದಕ್ಕೆ ರಸ್ತೆಯನ್ನು ಅಗೆಯಲಾಗಿದೆ. ಕಾರ್ಮಿಕರನ್ನು ಥಳಿಸಿ, ಯಂತ್ರಗಳಿಗೆ ಬೆಂಕಿ ಹಚ್ಚಲಾಗಿದೆ.
ಸ್ಥಳೀಯ ಶಾಸಕನ ಪ್ರತಿನಿಧಿ ಎಂದು ಹೇಳಿಕೊಂಡ ಜಗವೀರ್ ಸಿಂಗ್ ಎಂಬಾತ ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೇ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾನೆ ಎಂದು ಗೋರಖ್ಪುರ ಗುತ್ತಿಗೆದಾರರಾದ ಶಕುಂತಲಾ ಸಿಂಗ್ ಆಪಾದಿಸಿದ್ದಾರೆ. ಜಿಲ್ಲಾಧಿಕಾರಿ ಉಮೇಶ್ ಸಿಂಗ್ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮುಖ್ಯ ಆರೋಪಿ ಸಿಂಗ್, ಶಾಸಕನ ಜತೆ ನಿಯತವಾಗಿ ಕಾಣಿಸಿಕೊಳ್ಳುವ ವ್ಯಕ್ತಿ ಎಂದು ಪೊಲೀಸರೊಬ್ಬರು ದೃಢಪಡಿಸಿದ್ದಾರೆ.
"ಈ ಕಾಮಗಾರಿಯ ಅಂದಾಜು ವೆಚ್ಚ 12 ಕೋಟಿ ರೂಪಾಯಿ ಆಗಿದ್ದು, ಸ್ಥಳೀಯ ಮುಖಂಡ ದೊಡ್ಡಮೊತ್ತದ ಕಮಿಷನ್ ಕೇಳಿದ್ದ. ಜಗವೀರ್ ಸಿಂಗ್ ಮತ್ತು 15-20 ಮಂದಿಯ ಗುಂಪಿನ ವಿರುದ್ಧ ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ಗುತ್ತಿಗೆದಾರ ಕೀಳುದರ್ಜೆಯ ವಸ್ತುಗಳನ್ನು ಬಳಕೆ ಮಾಡುತ್ತಿದ್ದ ಕಾರಣಕ್ಕೆ ನಾನು ಆಕ್ಷೇಪಿಸಿದ್ದೆ. ಆತನೇ ಬಹುಶಃ ರಸ್ತೆಗೆ ಹಾನಿ ಮಾಡಿಕೊಂಡು ದೂರು ನೀಡಿರಬೇಕು" ಎಂದು ಸ್ಥಳೀಯ ಶಾಸಕ ಪ್ರತಿಕ್ರಿಯಿಸಿದ್ದಾರೆ.