ವಿವಾದಾತ್ಮಕ ಬಿಹು ಹಾಡು: ಅಸ್ಸಾಂ ಯೂಟ್ಯೂಬರ್ ಬಂಧನ
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಪ್ರತಿಕ್ರಿಯೆ ಏನು?
PC : NDTV
ಗುವಾಹಟಿ: ವಿವಾದಾತ್ಮಕ ಬಿಹು ಹಾಡಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂನ ಯೂಟ್ಯೂಬರ್ ಮತ್ತು ಗಾಯಕ ಅಲ್ತಾಫ್ ಹೊಸೈನ್ ಅವರನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.
ತಮ್ಮ ಹಾಡಿನ ಮೂಲಕ ರಾಜ್ಯದಲ್ಲಿ ಸಮುದಾಯಗಳ ವಿರುದ್ಧ ಹಗೆತನವನ್ನು ಪ್ರಚೋದಿಸಿದ ಆರೋಪದಲ್ಲಿ ಅವರನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಎಥುನ್ ಬಾಬು ಮತ್ತು ಮೌಸುಮಿ ಚೌಧರಿಯವರ ಬಾಂಗ್ಲಾದೇಶದ ಪ್ರತಿಭಟನಾ ಗೀತೆ "ದೇಶ್ ತಾ ತೋಮರ್ ಬಾಪರ್ ನಾಕಿ"ಗೆ ವಿವಾದಾತ್ಮಕ ಹಾಡಿಗೆ ಹೋಲಿಕೆ ಹೊಂದಿದೆ ಎನ್ನಲಾಗಿದೆ.
ಯೂಟ್ಯೂಬರ್ ಬಂಧನದ ಕುರಿತು ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು, "ಸಮುದಾಯದ ಸಾಮಾಜಿಕ ನಿಯಮಗಳಿಗೆ ಎಲ್ಲರೂ ಬದ್ಧವಾಗಿರಬೇಕು. ಯಾರಾದರೂ ನಮ್ಮ ನಾಗರಿಕತೆ, ಸಂಪ್ರದಾಯಗಳು ಅಥವಾ ಸಾಂಸ್ಕೃತಿಕ ಆಚರಣೆಗಳನ್ನು ನಮ್ಮ ರೂಢಿಗಳಿಗೆ ಹಾನಿಯುಂಟು ಮಾಡುವ ರೀತಿಯಲ್ಲಿ ಪ್ರಚಾರ ಮಾಡಿದರೆ, ಅದನ್ನು ಸ್ವೀಕರಿಸಲಾಗುವುದಿಲ್ಲ. ಉದಾಹರಣೆಗೆ, ಬಿಹುವನ್ನು 'ಮಿಯಾ ಬಿಹು' ಎಂದು ಬದಲಿಸಿದರೆ ಇದನ್ನು ಅಸ್ಸಾಮಿ ಜನರು ಸ್ವೀಕರಿಸುವುದಿಲ್ಲ," ಎಂದು ಹೇಳಿದ್ದಾರೆ.
ವಿವಿಧ ಜನಾಂಗೀಯ ಸಮುದಾಯಗಳಿಂದ ಟೀಕೆಗೆ ಗುರಿಯಾಗಿದ್ದರೂ, ಅಸ್ಸಾಂನ ಧುಬ್ರಿ ಜಿಲ್ಲೆಯ ನಿವಾಸಿ ಅಲ್ತಾಫ್ ಹೊಸೈನ್ ಅವರ ಹಾಡು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ.