ವಿವಾದಾತ್ಮಕ ಹೇಳಿಕೆ | ಕಂಗನಾ ರಣಾವತ್ಗೆ ಬಿಜೆಪಿ ವರಿಷ್ಠರಿಂದ ಸಮನ್ಸ್
ಕಂಗನಾ ರಣಾವತ್ | PTI
ಹೊಸದಿಲ್ಲಿ : ಬಿಜೆಪಿಯ ಮಂಡಿ ಸಂಸದೆ ಕಂಗನಾ ರಣಾವತ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಗುರುವಾರ ದಿಲ್ಲಿಯಲ್ಲಿ ಅವರ ನಿವಾಸದಲ್ಲಿ ಭೇಟಿಯಾದರು.
2020-21ರ ರೈತರ ಪ್ರತಿಭಟನೆಗಳ ವಿರುದ್ಧದ ಅವರ ಹೇಳಿಕೆಗಳಿಂದ ಬಿಜೆಪಿಯು ಅಂತರ ಕಾಯ್ದುಕೊಂಡು, ಪಕ್ಷದ ಪರವಾಗಿ ಹೇಳಿಕೆ ನೀಡಬೇಡಿ ಎಂದು ಸೂಚಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಮೂಲಗಳ ಪ್ರಕಾರ ಕಂಗನಾ ರಣಾವತ್ ಸುಮಾರು ಅರ್ಧ ಗಂಟೆ ಕಾಲ ಮಾತುಕತೆ ನಡೆಸಿದರು ಎನ್ನಲಾಗಿದೆ. ನಡ್ಡಾ ಅವರು ಹರಿಯಾಣದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸಭೆಗೆ ಮುಂಚಿತವಾಗಿ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ ಸಭೆಯಲ್ಲಿ ಭಾಗವಹಿಸಿದ ನಂತರ ಕಂಗನಾ ಭೇಟಿಯಾದರು.
2024 ರ ಲೋಕಸಭೆ ಚುನಾವಣೆಯಲ್ಲಿ 303 ಸ್ಥಾನದಿಂದ 240 ಕ್ಕೆ ಕುಸಿದ ನಂತರ ಬಿಜೆಪಿಯು ವಿಧಾನಸಭಾ ಚುನಾವಣೆಗಳ ಬಗ್ಗೆ ಹೆಚ್ಚಿನ ಗಮನಹರಿಸುತ್ತಿದೆ. ಚುನಾವಣೆಯ ನಿರ್ಣಾಯಕ ಹಂತದಲ್ಲಿ ಕಂಗನಾ ಹೇಳಿಕೆಗಳು ಪಕ್ಷಕ್ಕೆ ಮತ್ತಷ್ಟು ವಿರೋಧಿ ಅಲೆ ಹುಟ್ಟುಹಾಕಬಹುದು ಎಂದು ಪಕ್ಷದ ಅಧ್ಯಕ್ಷರೇ ಕಂಗನಾ ಅವರನ್ನು ಕರೆಸಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ ತಿಂಗಳಲ್ಲಿ ಹರ್ಯಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಣಾವತ್ ಹೇಳಿಕೆಯು ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಹಾನಿಯಾಗಬಹುದು ಎನ್ನಲಾಗಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದಲ್ಲಿ ಬಿಜೆಪಿ 10 ಸ್ಥಾನಗಳಿಂದ ಕೇವಲ ಐದಕ್ಕೆ ಇಳಿದಿತ್ತು. ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ತನ್ನ ಮತಗಳನ್ನು ಶೇಕಡಾ 28 ರಿಂದ 43 ಕ್ಕೆ ಹೆಚ್ಚಿಸಿಕೊಂಡಿರುವುದು ಬಿಜೆಪಿಗೆ ಬಿಸಿ ಮುಟ್ಟಿಸಿದೆ.
ಕಳೆದ ಎರಡು ದಿನಗಳಿಂದ, ಕಂಗನಾ ರಣಾವತ್ ಅವರ ಹೇಳಿಕೆಗೆ ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, “ಮಂಡಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಜನರು ಕಂಗನಾ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆಯೇ ಹೊರತು ಅಸಂಬದ್ಧ ಹೇಳಿಕೆಗಳನ್ನು ನೀಡಲು ಅಲ್ಲ. ಬಿಜೆಪಿಯು ತನ್ನ ಸಂಸದೆಗೆ ನಿಯಂತ್ರಣ ಹೇರಲಿ. ರೈತರ ಪ್ರತಿಭಟನೆ ಬಗ್ಗೆ ನೀಡುತ್ತಿರುವ ಕಂಗನಾ ಹೇಳಿಕೆ ಸಹಿಸಲಾಗದು" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು, ರೈತರು ದೇಶಕ್ಕೆ ಆಹಾರ ನೀಡುವವರು. ಅಂತಹ ಹೇಳಿಕೆಗಳನ್ನು ನೀಡುವ ಮೂಲಕ ರೈತರನ್ನು ಅವಮಾನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದರು.
ಹರಿಯಾಣದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ರಣಾವತ್ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.