ಬಿಜೆಪಿ ನಾಯಕನ ಅಪ್ರಾಪ್ತ ಪುತ್ರನಿಂದ ಮತದಾನ!
ವೀಡಿಯೋ ವೈರಲ್
ಹೊಸದಿಲ್ಲಿ: ಬಿಜೆಪಿ ನಾಯಕರೊಬ್ಬರ ಅಪ್ರಾಪ್ತ ಪುತ್ರ ಲೋಕಸಭಾ ಚುನಾವಣೆ ವೇಳೆ ಭೋಪಾಲದ ಬೆರಾಸಿಯಾ ಎಂಬಲ್ಲಿ ಮತದಾನ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವಿವಾದ ಸೃಷ್ಟಿಸಿದೆ.
ಮತದಾನ ಮಾಡುತ್ತಿರುವ ಅಪ್ರಾಪ್ತ ಬಿಜೆಪಿಯ ಪಂಚಾಯತ್ ನಾಯಕ ವಿನಯ್ ಮೆಹ್ರ್ ಅವರ ಪುತ್ರ ಎಂದು ತಿಳಿದು ಬಂದಿದೆ. ಮಂಗಳವಾರ ನಡೆದ ಚುನಾವಣೆ ವೇಳೆ ತಂದೆ ವೀಡಿಯೋ ಚಿತ್ರೀಕರಣ ನಡೆಸಿದ್ದರೆ ಮಗ ತಂದೆಯ ಪರವಾಗಿ ಇವಿಎಂನಲ್ಲಿ ಮತ ಚಲಾಯಿಸಿದ್ದಾನೆ.
ಈ 14 ಸೆಕೆಂಡ್ ಅವಧಿಯ ವೀಡಿಯೋವನ್ನು ವಿನಯ್ ಅವರ ಫೇಸ್ಬುಕ್ ಪುಟದಲ್ಲಿ ಶೇರ್ ಮಾಡಲಾಗಿತ್ತು. ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರ ಮಾಧ್ಯಮ ಸಲಹೆಗಾರ ಈ ವೀಡಿಯೋ ಕುರಿತು ಗಮನ ಸೆಳೆದಿದ್ದರು.
ಅಪ್ರಾಪ್ತ ಮತ್ತಾತನ ತಂದೆ ಇವಿಎಂನಲ್ಲಿ ಕಮಲದ ಚಿಹ್ನೆಯೆದುರು ಗುಂಡಿಯೊತ್ತುತ್ತಿರುವುದು ಕಾಣಿಸುತ್ತದೆ. ನಂತರ ವಿವಿಪ್ಯಾಟ್ ಸ್ಲಿಪ್ ಗೋಚರವಾಗುತ್ತಿರುವುದು ಹಾಗೂ ವಿನಯ್ ಮೆಹ್ರ್ “ಸರಿ, ಸಾಕು,” ಎನ್ನುತ್ತಿರುವುದು ಕೇಳಿಸುತ್ತಿದೆ.
ಮತದಾನ ಕೇಂದ್ರದೊಳಗೆ ಮೊಬೈಲ್ ಫೋನ್ ಅನುಮತಿಸದೇ ಇರುವುದು ಒಂದೆಡೆಯಾದರೆ ಇನೊಂದೆ ಅಪ್ರಾಪ್ತ ಬಾಲಕನನ್ನು ತಂದೆಯೊಂದಿಗೆ ಹೋಗಲು ಹೇಗೆ ಅನುಮತಿಸಲಾಯಿತು ಎಂಬ ಪ್ರಶ್ನೆಯಿದೆ.
ಈ ಕುರಿತಂತೆ ಜಿಲ್ಲಾ ಕಲೆಕ್ಟರ್ ವಿಕ್ರಮ್ ಸಿಂಗ್ ತನಿಖೆಗೆ ಆದೇಶಿಸಿದ್ದಾರೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಚುನಾವಣಾ ಆಯೋಗ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.
ಭೋಪಾಲ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಘಟನೆ ನಡೆದ ಬೆರಾಸಿಯಾ ಒಂದಾಗಿದೆ.