ಮಧ್ಯಪ್ರದೇಶ | ಪೊಲೀಸರ ಮೇಲೆ ಗ್ರಾಮಸ್ಥರಿಂದ ದಾಳಿ : ಎಎಸ್ಐ ಮೃತ್ಯು, ಹಲವು ಪೊಲೀಸರಿಗೆ ಗಾಯ

Photo credit: NDTV
ಭೋಪಾಲ್ : ಮಧ್ಯಪ್ರದೇಶದ ಗದ್ರಾ ಗ್ರಾಮದಲ್ಲಿ ವಿವಾದ ಬಗೆಹರಿಸಲು ತೆರಳಿದ ಪೊಲೀಸ್ ಅಧಿಕಾರಿಗಳ ಮೇಲೆ ಗ್ರಾಮಸ್ಥರು ದಾಳಿ ನಡೆಸಿದ್ದು, ಎಎಸ್ಐ ಓರ್ವರು ಮೃತಪಟ್ಟು, ಹಲವು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮೌಗಂಜ್ ಜಿಲ್ಲೆಯ ರಾಮನಗರಿ ಪಂಚಾಯತ್ ಗದ್ರಾ ಗ್ರಾಮದಲ್ಲಿ ಅಶೋಕ್ ಎಂಬಾತ ಮೃತಪಟ್ಟಿದ್ದ. ಪೊಲೀಸ್ ದಾಖಲೆಗಳ ಪ್ರಕಾರ, ಅಶೋಕ್ ಆರು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ, ಅಶೋಕ್ ನನ್ನು ಕೊಲೆ ಮಾಡಲಾಗಿದೆ ಎಂದು ರಾಜನ್ ದ್ವಿವೇದಿ ಎಂಬಾತನನ್ನು ಅಪಹರಿಸಿ ಬುಡಕಟ್ಟು ಜನರ ಗುಂಪೊಂದು ಹಲ್ಲೆ ನಡೆಸಿ ಕೊಲೆ ಮಾಡಿದೆ.
ರಾಜನ್ ದ್ವಿವೇದಿಯ ಅಪಹರಣ ಮತ್ತು ಕೊಲೆ ಬಗ್ಗೆ ಮಾಹಿತಿ ತಿಳಿದು ಸ್ಥಳೀಯ ಪೊಲೀಸರು ಸ್ಥಳಕ್ಕೆ ತೆರಳಿದರು, ಈ ವೇಳೆ ಪೊಲೀಸರ ಮೇಲೆ ಗ್ರಾಮಸ್ಥರ ಮೇಲೆ ಕಲ್ಲು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಲ್ಲಿ ಗಾಯಗೊಂಡಿದ್ದ ವಿಶೇಷ ಸಶಸ್ತ್ರ ಪಡೆಯ ಎಎಸ್ಐ ರಾಮಚರಣ್ ಗೌತಮ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಾಯಗೊಂಡ ಇತರ ಪೊಲೀಸ್ ಅಧಿಕಾರಿಗಳನ್ನು ಮೌಗಂಜ್ನ ಸಿವಿಲ್ ಆಸ್ಪತ್ರೆ ಮತ್ತು ಆಶೀರ್ವಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ತೆರಳಿದ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಂಕಿತಾ ಅವರನ್ನು ಗ್ರಾಮಸ್ಥರು ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅವರನ್ನು ರಕ್ಷಿಸಿದರು.
ಈ ಘಟನೆಯು ಮಧ್ಯಪ್ರದೇಶದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ʼರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಪೊಲೀಸರು ಕೂಡ ಸುರಕ್ಷಿತವಾಗಿಲ್ಲʼ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿತೇಂದ್ರ ಪಟ್ವಾರಿ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.