ಭ್ರಷ್ಟಾಚಾರ ಪ್ರಕರಣ: ಬಿಜೆಪಿಯ ಮನ್ಪ್ರೀತ್ ಬಾದಲ್ ವಿರುದ್ಧ ಲುಕ್ಔಟ್ ನೋಟಿಸ್
ಮನ್ಪ್ರೀತ್ ಸಿಂಗ್ ಬಾದಲ್ (Photo: X/@Gagan4344)
ಚಂಡಿಗಡ: ಬಠಿಂಡಾದಲ್ಲಿ ಆಸ್ತಿ ಖರೀದಿಯಲ್ಲಿ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ಪಂಜಾಬಿನ ಮಾಜಿ ಹಣಕಾಸು ಸಚಿವ ಮನ್ಪ್ರೀತ್ ಸಿಂಗ್ ಬಾದಲ್ ವಿರುದ್ಧ ರಾಜ್ಯ ಜಾಗ್ರತ ಘಟಕವು ಮಂಗಳವಾರ ಲುಕ್ಔಟ್ ನೋಟಿಸನ್ನು ಹೊರಡಿಸಿದೆ.
ಬಂಧನವನ್ನು ತಪ್ಪಿಸಿಕೊಳ್ಳಲು ಬಾದಲ್ ದೇಶದಿಂದ ಪರಾರಿಯಾಗಬಹುದು ಎಂದು ಶಂಕಿಸಿರುವ ಅಧಿಕಾರಿಗಳು ಎಲ್ಲ ವಿಮಾನ ನಿಲ್ದಾಣಗಳಿಗೆ ಲುಕ್ಔಟ್ ನೋಟಿಸನ್ನು ಜಾರಿಗೊಳಿಸಿದ್ದಾರೆ. ಬಠಿಂಡಾ ಆಸ್ತಿ ಹಗರಣದಲ್ಲಿ ಬಾದಲ್ ಮತ್ತು ಇತರ ಐವರ ವಿರುದ್ಧ ಜಾಗ್ರತ ಅಧಿಕಾರಿಗಳು ಸೋಮವಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಬಾದಲ್ ಪತ್ತೆಗಾಗಿ ಪೋಲಿಸರು ಅವರ ನಿವಾಸ ಮತ್ತು ಬಲ್ಲ ಇತರ ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಿದ್ದರೂ ಅವರ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಬಾದಲ್ ಈ ವರ್ಷದ ಜನವರಿಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಬಠಿಂಡಾ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಮುಖ್ಯ ಆಡಳಿತಾಧಿಕಾರಿ ಬಿಕ್ರಂ ಸಿಂಗ್ ಶೇರ್ಗಿಲ್ ಅವರು ಹಾಗೂ ಇತರ ನಾಲ್ವರೂ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಬಠಿಂಡಾದ ಪ್ರಮುಖ ಸ್ಥಳದಲ್ಲಿ ಆಸ್ತಿ ಖರೀದಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮಾಜಿ ಶಾಸಕ ಸರೂಪ ಚಂದ್ ಸಿಂಗ್ಲಾ ಅವರು ಜಾಗ್ರತ ಘಟಕಕ್ಕೆ ದೂರು ಸಲ್ಲಿಸಿದ್ದರು.